ಕೋಲಶಿರ್ಸಿ… ಹಲವು ವೈಶಿಷ್ಟ್ಯಗಳ ಗ್ರಾಮ. ಈ ಗ್ರಾಮದಲ್ಲಿ ಹೊಟ್ಟ್ ಕೆರೆ,ಹೊಸಕೆರೆ, ದೇವರ ಕೆರೆಗಳೆಂಬ ಮೂರು ಕೆರೆಗಳಿವೆ. ಸರಿಸುಮಾರು ೬ ನೂರು ಮನೆಗಳಲ್ಲಿ ಬಹುಪಾಲು ಹಳೆಪೈಕ,ದೀವರ ಮನೆಗಳು. ಒಂದು ಕುಟುಂಬ ಮಾತ್ರ ಹವ್ಯಕರದ್ದು,ಕೆಲವು ಕುಟುಂಬಗಳು ಲಿಂಗಾಯತ ಗೌಡರು ಮತ್ತು ಶೆಟ್ಟರಿಗೆ ಸೇರಿವೆ. ಒಂದು ಬಡಗಿ ಕುಟುಂಬ. ಇದೇ ಬಡಗಿ ಕುಟುಂಬ ಬಹುಸಂಖ್ಯಾತ ನಾಮಧಾರಿ ದೀವರ ಕೋಲಶಿರ್ಸಿ ಗ್ರಾಮದ ಮಾರಿಕಾಂಬಾ ದೇವಿ ಪೂಜಿಸುವ ಕುಟುಂಬ. ಇವರಂತೇ ಏಕೈಕ ಕುಟುಂಬವಾಗಿರುವ ಗಣಪತಿ ಹೆಗಡೆಯವರ ಕುಟುಂಬ ಗ್ರಾಮದ ಧಾರ್ಮಿಕ ಕೆಲಸಗಳಿಗೆ ಪೌರೋಹಿತ್ಯ ವಹಿಸುವುದು.
ಆದಿ ಯೋಧರು, ಹಳೆಪೈಕ ಪರಾಕ್ರಮಿ ಸೈನಿಕರ ಊರಾ ಗಿದ್ದರಿಂದ ಕೋಲಶಿರ್ಸಿ ಎಂದರೆ ಅನ್ಯರಿಗೆ ತುಸು ಆತಂಕ, ಅನುಮಾನ ಆದರೆ ಊರೊಳಗೆ, ನೆರೆಹೊರೆಗೆ ಕೋಲಶಿರ್ಸಿಯೆಂದರೆ ನಿರುಪದ್ರವಿಗಳ ಊರು.ಸ್ನೇಹ-ಸಹಬಾಳ್ವೆ,ಸೌಹಾರ್ದತೆ ಇಲ್ಲಿಯ ಉಸಿರು.
ಇಂತಿಪ್ಪ ಕೋಲಶಿರ್ಸಿಯಲ್ಲಿ ಹೊಳೆಹಬ್ಬವಾಗಲಿ,ಮಾರಿಜಾತ್ರೆಯಾಗಲಿ, ಆರಿದ್ರಹಬ್ಬವಾಗಲಿ ಎಲ್ಲವೂ ವಿಶೇಷವೇ. ವಾರ್ಷಿಕವಾಗಿ ಆಚರಿಸುವ ಕುಮಾರರಾಮನ ಆರಾಧನೆ ಹನಿಹಬ್ಬ ಅಥವಾ ಆರಿದ್ರಮಳೆ ಹಬ್ಬ, ವಾರ್ಷಿಕ ಚೌತಿ,ಗೌರಿ-ಗಣೇಶ ಹಬ್ಬ ಐದು ವರ್ಷಕ್ಕೋ ಆರೇಳು ವರ್ಷಗಳಿಗೋ ಒಮ್ಮೆ ಬರುವ ಹೊಳೆಹಬ್ಬ, ಮಾರಿಕಾಂಬಾ ದೇವಿ ಜಾತ್ರೆ ಎಲ್ಲಾ ಸಂದರ್ಭಗಳೂ ಸಡಗರದ ಕೂಟಗಳೇ.
ಕೋಲಶಿರ್ಸಿಯಲ್ಲಿ ಮಾರಿಕಾಂಬಾ ದೇವಿ ಆಗಮನ, ಮಾರಿಕಾಂಬಾ ದೇವಿ ಜಾತ್ರೆಗಳಿಗೆಲ್ಲಾ ಸರಿಸುಮಾರು ೨೦೦ ವರ್ಷಗಳ ಭವ್ಯ ಚರಿತ್ರೆಯಿದೆ ಎಂದರೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಎರಡು ಶತಮಾನಗಳ ಹಿಂದೆ ಅಂದರೆ ಸುಮಾರು ಎಂಟ್ಹತ್ತು ತಲೆಮಾರುಗಳ ಹಿಂದೆ ಆಗಿನ ಗಾಡಿ ಮಾರಿ ಅಥವಾ ಗಡಿಮಾರಿಯಂತೆ ಕೋಲಶಿರ್ಸಿಗೆ ಬಂದಿಳಿದ ಮಾರಿಯನ್ನು ಹೆಗ್ಗರಣೆ ಕಡೆಯಿಂದ ಸಿದ್ಧಾಪುರ ಕಡೆಗೆ ಎಳೆದು ತರುತ್ತಿರಲಾಗಿ ಕೋಲಶಿರ್ಸಿ ಬಳಿ ಬಂದಾಗ ಮುಂಜಾನೆ ಬೆಳಗಾಗಿಅಲ್ಲಿ ಬಿಟ್ಟುಹೋದ ಮಾರಿ ಮುಂದೆ ಮಾರಿಕಾಂಬೆಯಾದ ಬಗ್ಗೆ ವಿಶಿಷ್ಟ ಕತೆಯಿದೆ.
ಪರ ಊರಿನಿಂದ ಬಂದ ಮಾರಿ ಮರವೊಂದರ ಕಟ್ಟೆಯ ಮೇಲೆ ಪೂಜಿಸಲ್ಪಡುತಿದ್ದಾಗ ಗ್ರಾಮದ ಬಾಲಕಿಯ ಮೇಲೆ ಹೇಳಿಕೆಯಾಗಿ ಆಹ್ವಾಹನೆಯಾದ ಮಾರಿ ತನಗೆ ಇದೇ ಊರಲ್ಲಿ ಒಂದು ದೇವಸ್ಥಾ ನವಾಗಬೇಕು, ಇಲ್ಲಿಯೇ ಜಾತ್ರೆ ಮಾಡಬೇಕು ಎಂದು ಹೇಳಿಕೆ ಮಾಡಿಸಿತಂತೆ. ಈ ಘಟನೆ ನಂತರ ಗ್ರಾಮಸ್ಥರೆಲ್ಲಾ ಸೇರಿ ಇಲ್ಲೊಂದು ಪುಟ್ಟ ದೇ ವಾಲಯ ಮಾಡುವುದು ನಂತರ ಜಾತ್ರೆ ಮಾಡಬೇಕೆಂದು ನಿರ್ಣಯಿಸಿದರಂತೆ. ಈ ತೀರ್ಮಾನದ ನಂತರ ಜಾತ್ರೆಗೆ ರಥ ನಿರ್ಮಿಸಲು ಕುನ್ನಳ್ಳಿ ಅಥವಾ ಕುನ್ಹಳ್ಳಿ ಬಳಿ ವಾಟೆ ಮರ ಕಡಿದು ಉರುಳಿಸಿದಾಗ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಅನಾಮಧೇಯರ ದೂರು ಹೋಗಿ ಮರ ಕಡಿದ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿ ಹೊನ್ನಾವರ ನ್ಯಾಯಾಲಯದ ಮೆಟ್ಟಿಲೇರಿತಂತೆ ( ಈ ಬಗ್ಗೆ ಲಿಖಿ ತ ದಾಖಲೆ ಲಭ್ಯವಿದೆ)
ಈ ಪ್ರಕರಣದ ನಂತರ ಹೊನ್ನಾವರ ನ್ಯಾಯಾಲಯದಲ್ಲಿ ವಾದಿಸಲು ಸಾಧ್ಯವಿಲ್ಲದ ಗ್ರಾಮದ ಜನಸಾಮಾನ್ಯರ ಪರವಾಗಿ ಊರಿನ ಗೌಡರು ತಿಂಗಳುಗಟ್ಟಲೆ ಹೊನ್ನಾವರದಲ್ಲಿ ಉಳಿದು ವಕೀಲರ ಮೂಲಕ ಪ್ರಕರಣ ನಡೆಸಿದರು. ನಂತರ ಗ್ರಾಮಸ್ಥರೆಲ್ಲಾ ಸಂಘಟಿತರಾಗಿ ಮಾರಿಕಾಂಬಾ ದೇವಿಗೆ ದೇವಾಲಯ ನಿರ್ಮಾಣ, ಜಾತ್ರೆ ಆಚರಣೆ ಮುಂದುವರಿಸಿದರು.
ಗ್ರಾಮದ ರೋಗ ರುಜಿನಗಳು,ಸಂಕಷ್ಟಗಳಿಂದ ಪಾರು ಮಾಡೆಂದು ಬೇಡಿಕೆ ಇಟ್ಟು ಆರಾಧಿಸುವ ಮಾರಿಕಾಂಬೆಗೆ ಈಗ ಸುಸಜ್ಜಿತ ದೇವಾಲಯ ನಿರ್ಮಾಣವಾಗುತ್ತಿದೆ. ಕಳೆದ ನೂರಾರು ವರ್ಷಗಳಿಂದಲೂ ಕೆಲವು ಬಾರಿ ಕೆಲವು ವರ್ಷಗಳ ಅಂತರದ ನಡುವೆ, ನಡುನಡುವೆ ನಿಯಮಿತವಾಗಿ ಐದು ಅಥವಾ ಏಳು ವರ್ಗಳಿಗೊಮ್ಮೆಕೋಲಶಿರ್ಸಿ ಮಾರಿಕಾಂಬಾ ದೇವಿ ಜಾತ್ರೆ ನಡೆಸಿದ ಬಗ್ಗೆ ದಾಖಲೆಗಳಿವೆ.
ಈ ವರ್ಷದ ಜಾತ್ರೆ ಈ ಹಿಂದೇ ೭ ವರ್ಷಗಳಿಗೆ ನಡೆಯಬೇಕಿದ್ದರೂ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ೯ ನೇ ವರ್ಷಕ್ಕೆ ನೆರವೇರುತ್ತಿದೆ. ೯ ವರ್ಷಗಳ ನಂತರ ನಡೆಯುವ ಇಲ್ಲಿಯ ಮಾರಿಕಾಂಬಾ ದೇವಿ ಜಾತ್ರೆಗೆ ಊರಿಗೆ ಊರೇ ಸುಣ್ಣ-ಬಣ್ಣ ಬಳಿದುಕೊಂಡು. ಚಪ್ಪರ, ಚಿತ್ತಾರಗಳಿಂದ ಕಂಗೊಳಿಸುತ್ತಿದೆ.ಫೆಬ್ರವರಿ೨೧ ರಿಂದ ೨೮ ರ ವರೆಗೆ ೨೦೨೩ ರ ಮಾರಿಕಾಂಬಾ ದೇವಿ ಜಾತ್ರೆ ಒಂದು ವಾರಗಳ ಕಾಲ ನಡೆಯಲಿದೆ.
(- ಕನ್ನೇಶ್ ಕೋಲಶಿರ್ಸಿ , ಸಿದ್ಧಾಪುರ.)