

ತೆಲಂಗಾಣ ರಾಜ್ಯದ ನೂತನ ವಿಧಾನಸಭೆಗೆ ಆಯ್ಕೆಯಾಗಿರುವ ಎಂಟು ಮಂದಿ ಭಾರತೀಯ ಜನತಾ ಪಕ್ಷದ ಶಾಸಕರು ಹಂಗಾಮಿ ಸಭಾಧ್ಯಕ್ಷ ಅಕ್ಬರುದ್ದೀನ್ ಒವೈಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸಂವಿಧಾನ ಬದ್ಧ ಶಾಸನಸಭೆಗೆ ಆಯ್ಕೆಯಾಗಲು ನಮ್ಮಲ್ಲಿ ಯಾವುದೇ ಕನಿಷ್ಠ ವಿದ್ಯಾರ್ಹತೆಯನ್ನು ನಿರ್ಧಿಷ್ಟ ಪಡಿಸಿದಿರುವುದು ಇಂತಹ ಅನಾಹುತಗಳಿಗೆ ಕಾರಣವಾಗಿದೆ. ವಿದ್ಯೆಗಿಂತ ಹೆಚ್ಚಾಗಿ ಹಣಬಲ, ತೋಳ್ಬಲ ಮತ್ತು ಜಾತಿ ಹಾಗೂ ಧರ್ಮದ ಬೆಂಬಲವಿದ್ದರೆ ಯಾರು ಬೇಕಾದರೂ ಭಾರತದ ಸಂಸತ್ತಿಗೆ ಅಥವಾ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಹೋಗಬಹುದಾಗಿದೆ. ಇದು ಇಂತಹ ಅಮಾನವೀಯ ನಡುವಳಿಕೆಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಶೇಕಡಾ ಎಂಬತ್ತುಕ್ಕೂ ಹೆಚ್ಚು ಮಂದಿ ಕೋಟ್ಯಾಧೀಶ್ವರರು ಭಾರತದ ಶಾಸನ ಸಭೆಗಳಳಿಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.

ತೆಲಂಗಾಣದ ಶಾಸಕರು ಪ್ರಮಾಣವಚನ ಸ್ವೀಕರಿಸುವುದಕ್ಕೆ ನೀರಾಕರಿಸಲು ನೀಡಿರುವ ಕಾರಣವು ಇಡೀ ಭಾರತದ ನಾಗರೀಕರು ತಲೆ ತಗ್ಗಿಸುವ ಸಂಗತಿ. ಸಂವಿಧಾನ ನಿಯಮ 188 ರ ನಿಯಮದ ಪ್ರಕಾರ ಪ್ರತಿಯೊಬ್ಬ ಜನಪ್ರತಿನಿಧಿಯು ಅಂದರೆ ಶಾಸಕನು ಶಾಸನ ಸಭೆಯಲ್ಲಿ ಜನಪ್ರತಿನಿಧಿಯಾಗಿ ಕೂರುವ ಮುನ್ನ ಆಯಾ ರಾಜ್ಯಗಳ ರಾಜ್ಯಪಾಲರು ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿಗಳಿಂದ ಸಂವಿಧಾನಬದ್ಧ ಪ್ರಮಾಣ ವಚನವನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ವಿಧಾನಸಭೆಗೆ ಆಯ್ಕೆಯಾದ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಅಥವಾ ಸಭಾಧ್ಯಕ್ಷರನ್ನಾಗಿ ರಾಜ್ಯಪಾಲರು ನೇಮಕ ಮಾಡುವುದು ಈವರಗೆ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ.
ವಿಶಾಲ ಆಂಧ್ರಪ್ರದೇಶವು 2014 ರಲ್ಲಿ ವಿಭಜನೆಗೊಂಡು ತೆಲಂಗಾಣ ಮತ್ತು ಆಂಧ್ರ ಎಂಬ ಹೆಸರಿನಲ್ಲಿ ಎರಡು ರಾಜ್ಯಗಳು ಅಸ್ತಿತ್ವಕ್ಕೆ ಬಂದ ನಂತರ ತೆಲಂಗಾಣದಲ್ಲಿ ನಡೆದ ಮೂರನೇ ವಿಧಾನ ಸಭಾ ಚುನಾವಣೆಯ ನೂರ ಹತ್ತೊಂಬತ್ತು ಸದಸ್ಯರಲ್ಲಿ ಆಯ್ಕೆಯಾದ ಅತ್ಯಂತ ಹಿರಿಯ ಸದಸ್ಯರೆಂದರೆ, ಕಾಂಗ್ರೇಸ್ ಪಕ್ಷದ ಉತ್ತಮ್ ಕುಮಾರ್ ರೆಡ್ಡಿ ಹಾಗೂ ಹಿಂದಿನ ವಿಶಾಲಾಂಧ್ರ ವಿಧಾನ ಸಭೆಯೂ ಒಳಗೊಂಡಂತೆ ಒಟ್ಟು ಆರು ಬಾರಿ ಆಲ್ ಇಂಡಿಯ ಮಜ್ಲಿಸ್ ಇ ಇತ್ತಾಹದುಕ್ ಮುಸ್ಲಿಂ ಪಕ್ಷದಿಂದ ( ಎ.ಇ.ಎಂ.ಐ.ಎ.) ಆಯ್ಕೆಯಾಗಿರುವ ಅಕ್ಬರುದ್ದೀನ್ ಒವೈಸಿ ಮಾತ್ರ. ಉತ್ತಮ್ ಕುಮಾರ ರೆಡ್ಡಿ ಅವರು ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಪ್ರಕ್ಷದ ಸರ್ಕಾರದಲ್ಲಿ ನೂತನ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದಲ್ಲಿರುವ ಕಾರಣ ಹಂಗಾಮಿ ಸ್ಪೀಕರ್ ಆಗುವ ಅವಕಾಶವು ಅಕ್ಬರುದ್ದೀನ್ ಒವೈಸಿಗೆ ದೊರೆಯಿತು.


ವಾಸ್ತವವಾಗಿ ತೆಲಂಗಾಣ ರಾಜ್ಯದ ರಾಜಕೀಯದಲ್ಲಿ ಹೈದರಾಬಾದ್ ಕ್ಷೇತ್ರದ ಸಂಸದ ಅಸಾಸುದ್ದೀನ್ ಒವೈಸಿ ಸ್ಥಾಪಿಸಿರುವ ಐ ಇ ಎಂ. ಐ.ಎಂ.ಎಂಬ ಪ್ರಾದೇಶಿಕ ಪಕ್ಷವು ಕಾಂಗ್ರೇಸ್ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ವಿರೋಧಿ ನಿಲುವು ತಳೆದಿರುವ ಪಕ್ಷವಾಗಿದೆ. ಆದರೆ, ಬಹುತೇಕ ಮಂದಿ ತೆಲಂಗಾಣದಲ್ಲಿ ಈ ಪಕ್ಷವನ್ನು ಬಿ.ಜೆ.ಪಿ.ಯ ಅಂಗಪಕ್ಷವೆಂದು ಗೇಲಿ ಮಾಡುವುದುಂಟು. ಏಕೆಂದರೆ, ಉತ್ತರ ಪ್ರದೇಶ ಮತ್ತು ನೆರೆಯ ಆಂಧ್ರದಲ್ಲಿ ಬಿ.ಜೆ.ಪಿ. ವಿರೋಧಿ ಮತಗಳನ್ನು ವಿಂಗಡಿಸಿ ಬಿಜೆಪಿಯನ್ನು ಅಧಿಕಾರ ತರಲು ಈ ಪಕ್ಷವು ಕಾರಣವಾಗುತ್ತಿದೆ.
ಉತ್ತರ ಪ್ರದೇಶದ ವಿಧಾನ ಸಭೆಯ ಚುನಾವಣೆಯಲ್ಲಿ ಐವತ್ತೆöÊದು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು ಸಮಾಜವಾದಿ ಪಕ್ಷಗಳ ಅಭ್ಯರ್ಥಿಗಳು ಕೇವಲ ಎರಡರಿಂದ ಐದು ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಈ ಕ್ಷೇತ್ರಗಳಲ್ಲಿ ಮಾಯಾವತಿ ನೇತೃತ್ವದ ಬಿ.ಎಸ್.ಪಿ. ಅಬ್ಯರ್ಥಿಗಳು ಮತ್ತು ಅಸಾಸುದ್ದೀನ್ ಒವೈಸಿ ಪಕ್ಷದ ಅಭ್ಯರ್ಥಿಗಳು ತಲಾ ಐದರಿಂದ ಹತ್ತು ಸಾವಿರ ದಲಿತರು ಹಾಗೂ ಮುಸ್ಲಿಂ ರ ಮತಗಳನ್ನು ಕಸಿದುಕೊಂಡು ಆದಿತ್ಯನಾಥ ಯೋಗಿ ನೇತೃತ್ವದ ಬಿ.ಜೆ.ಪಿ. ಸರ್ಕಾರವನ್ನು ಮತ್ತೇ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಕಾರಣವಾಗಿದ್ದರು.
ತೆಲಂಗಾಣದ ವಿಧಾನಸಭಾ ಸದಸ್ಯ ಅಕ್ಬರುದ್ದೀನ್ ಒವೈಸಿ ಅಸಾಸುದ್ದೀನ್ ಒವೈಸಿ ಅವರ ಕಿರಿಯ ಸಹೋದರ. ಹಿರಿಯ ಸದಸ್ಯ ಎಂಬ ಅರ್ಹತೆಯ ಮೇರೆಗೆ ತೆಲಂಗಾಣದ ರಾಜ್ಯಪಾಲರಾದ ಶ್ರೀಮತಿ ತಮಿಳ್ಇಸೈ ಸುಂದರ ರಾಜನ್ ಅವರು ಅಕ್ಬರುದ್ದೀನ್ ಒವೈಸಿ ಅವರನ್ನು ಹಂಗಾಮಿ ಸಭಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಪ್ರಮಾಡಿ ಪ್ರಮಾಣ ವಚನ ಬೋಧಿಸಿದ್ದರು.
2019 ರಲ್ಲಿ ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದ ವತಿಯಿಂದ ರಾಜ್ಯಪಾಲರಾಗಿ ನೇಮಕಗೊಂಡ ತಮಿಳ್ ಇಸೈ ಅವರ ನಿರ್ಧಾರಕ್ಕೆ ಕಾಂಗ್ರೇಸ್ ಪಕ್ಷ ಅಥವಾ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಸಮಧಾನ ವ್ಯಕ್ತಪಡಿಸಿಸಬೇಕಿತ್ತು. ಆದರೆ, ಅವರಿಗೆ ಸಂವಿಧಾನದ ನಡಾವಳಿಗಳ ಕುರಿತು ಪ್ರಜ್ಞೆ ಇರುವ ಕಾರಣ ರಾಜ್ಯಪಾಲರ ನಿರ್ಧಾರವನ್ನು ಗೌರವಿಸಿದರು. ತಮ್ಮದೇ ಪಕ್ಷದ ವತಿಯಿಂದ ನೇಮಕಗೊಂಡ ರಾಜ್ಯಪಾಲರು ತಮ್ಮಂತೆ ಜಾತಿ ಮತ್ತು ಧರ್ಮದ ಕೊಳ್ಳಿದೆವ್ವಗಳಾಗಿ ಕುಣಿಯಲಿಲ್ಲ ಎಂದು ಆಕ್ರೋಶಗೊಂಡ ಎಂಟು ಮಂದಿ ಬಿ.ಜೆ.ಪಿ. ಶಾಸಕರು ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿ ವಿಧಾನ ಸಭೆಯಿಂದ ಹೊರ ನಡೆದಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಸಂವಿಧಾನಬದ್ಧವಾಗಿ ಪಕ್ಷಾತೀತ ನಿಲುವಿನಿಂದ ನಡೆದುಕೊಳ್ಳಬೇಕಾದ ರಾಜ್ಯಪಾಲರುಗಳು ಬಿ.ಜೆ.ಪಿ. ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಪಕ್ಷದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದು ಇವರ ನಡುವಳಿಕೆಗಳು ಸುಪ್ರೀಂ ಕೋರ್ಟಿನಿಂದ ತೀವ್ರವಾದ ಆಕ್ರೋಶ ಮತ್ತು ಟೀಕೆಗೆ ಒಳಗಾಗಿವೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಪಾಲರುಗಳ ವರ್ತನೆಯಿಂದ ಅಲ್ಲಿನ ರಾಜ್ಯಗಳ ಅಭಿವೃದ್ಧಿಕಾರ್ಯಗಳು ಕುಂಠಿತಗೊಂಡಿವೆ, ಇವರ ವರ್ತನೆಗಳು ಭಾರತದ ಪ್ರಜ್ಞಾವಂತ ನಾಗರೀಕರಲ್ಲಿ ಅಸಹ್ಯ ಹುಟ್ಟಿಸಿವೆ.
ತೆಲಂಗಾಣದ ರಾಜ್ಯಪಾ¯ರಾದ ಶ್ರೀಮತಿ ತಮಿಳ್ ಇಸೈ ಸುಂದರರಾಜನ್ ಸಾಮಾನ್ಯ ಹೆಣ್ಣು ಮಗಳಲ್ಲ. ಅವರ ವಿಧ್ಯಾರ್ಹತೆ, ಅನುಭವ, ಸಾಮಾಜಿಕ ಸೇವೆ ಇವೆಲ್ಲವೂ ಅವರನ್ನು ಪಕ್ಷಗಳನ್ನು ಮೀರಿ ಸಂವಿಧಾನಬದ್ಧವಾಗಿ ನಡೆದುಕೊಳ್ಳುವಂತೆ ಮಾಡಿವೆ. ಈ ಕಾರಣಕ್ಕಾಗಿ ಅವರು ಹಿಂದಿನ ತೆಲಂಗಾಣದಲ್ಲಿ ಬಿ.ಆರ್.ಎಸ್ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಕೆ.ಚೆಂದ್ರಶೇಖರ ರಾವ್ ಗೆ ಯಾವುದೇ ಕಿರಿ ಕಿರಿ ಉಂಟು ಮಾಡಲಿಲ್ಲ.
ತಮಿಳುನಾಡು ಜಿಲ್ಲೆಯ ನಾಗರಕೋಯಿಲ್ ಪ್ರದೇಶದವರಾದ ತಮಿಳ್ ಇಸೈ ಅವರು ಚೆನ್ನೆöÊ ನಗರದ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಖ್ಯಾತ ಸ್ತ್ರೀ ರೋಗ ತಜ್ಞೆಯಾಗಿ ಅವರು ಚೆನ್ನೈ ನಗರದ ಎಂ.ಜಿ.ಆರ್. ಆಸ್ಪತ್ರೆಯಲ್ಲಿ ಪ್ರಸಿದ್ಧಿಯಾಗಿದ್ದರು. ಜೊತೆಗೆ ತಮಿಳುನಾಡಿನ ಅಖಿಲ ಭಾರತ ವೈದ್ಯಕೀಯ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ತಮಗೆ ಇದ್ದ ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರೂ ವೈದ್ಯಕೀಯ ಪದವೀಧರರಾಗಿ ಜೀವನಕ್ಕೆ ಕಾಲಿಡುವ ಮುನ್ನವೇ ಅಕಾಲ ಮೃತ್ಯುವಿಗೆ ಈಡಾದ ನಂತರ ಅವರು ರಾಜಕೀಯ ಪ್ರವೇಶ ಮಾಡಿದರು.
ಚೆನ್ನೈ ನಗರ ಮತ್ತು ತೂತ್ತುಕುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಟ್ಟು ಆರು ಬಾರಿ ಸೋಲನ್ನು ಅನುಭವಿಸಿದ್ದರು ನಂತರ ಬಿ.ಜೆ.ಪಿ.ಯಲ್ಲಿ ರಾಷ್ಟೀಯ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿದ್ದ ಇವರನ್ನು ಮೋದಿಯವರು 2019 ರಲ್ಲಿ ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಕ ಮಾಡಿದರು.
ಪಕ್ಷದ ಕಾರ್ಯಕರ್ತೆಯಾಗಿದ್ದರೂ ಸಹ ಸವಿಂಧಾನ ಬದ್ಧ ನಡುವಳಿಕೆಗೆ ಆದ್ಯತೆಯನ್ನು ತೋರಿದ ರಾಜ್ಯಪಾಲರ ನಿರ್ಧಾರದ ಬಗ್ಗೆ ತೆಲಂಗಾಣ ಶಾಸಕರು ಮತ್ತು ನಮ್ಮ ಕರ್ನಾಟಕದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಇಂತಹ ವ್ಯಕ್ತಿಗಳಿಗೆ ನಾವು ಸಂವಿಧಾನವನ್ನು ಓದಿಸಬೇಕಿದೆ
ಜೊತೆಗೆ ಎಲ್ಲಾ ರಾಜಕಾರಣಿಗಳಿಗೆ ಸಂವಿಧಾನದ ಓದುವಿಕೆಯನ್ನು ಕಡ್ಡಾಯ ಮಾಡಬೇಕಿದೆ. ಏಕೆಂದರೆ, ವರ್ತಮಾನದ ಭಾರತದಲ್ಲಿ ಪಕ್ಷ ಬೇಧವಿಲ್ಲದೆ ಪ್ರತಿಯೊಬ್ಬ ಸಚಿವ ಮತ್ತು ಶಾಸಕ ಮತ್ತು ಸಂಸದರು ತಮ್ಮ ಕ್ಷೇತ್ರದಲ್ಲಿ ತಮ್ಮದೇ ಜಾತಿ ಸಮುದಾಯದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ಭವಿಷ್ಯದ ಭಾರತಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.
.
ಜಗದೀಶ್ ಕೊಪ್ಪ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






