————————–
ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ
-ದೇವನೂರ ಮಹಾದೇವ
ಸಭೆಯ ಉದ್ಘಾಟನೆಯನ್ನು ನಾಡಿನ ಯಜಮಾನರಾದ ನಮ್ಮೆಲ್ಲರ ಪ್ರೀತಿಯ ನಾಗಮೋಹನ್‌ದಾಸ್ ಅವರು ಮಾಡಬೇಕಿತ್ತು. ಒಂದು ಸಕಾರಣದಿಂದ ಅವರು ಬರಲಾಗುತ್ತಿಲ್ಲ. ನಾನೂನೂ ಸ್ವಲ್ಪ ಚಿಕ್ಕೆಜಮಾನನ ಟೈಪೇ! ಹಾಗಾಗಿ ನಾನು ಉದ್ಘಾಟನೆ ಮಾಡಬೇಕಾಗಿ ಬಂದಿದೆ. ಮಳೆ ಬೆಳೆ ಇಲ್ಲದ ನಮ್ಮ ಕಡೆಯ ಜನರು ಮಂಡ್ಯ ಜಿಲ್ಲೆಯ ಗದ್ದೆಸೀಮೆಗೆ ಕಟಾವು ಟೈಮಲ್ಲಿ ಕೂಲಿನಾಲಿಗೆ ಹೋಗಿ ಬರುತ್ತಿದ್ದರು. ಅವರು ಮಂಡ್ಯ ಜಿಲ್ಲೆಯಲ್ಲಿ ಎಲ್ಲೆಲ್ಲು ಹಸಿರಾಗಿರುವ ಪರಿ, ನೀರು ಹರಿಯುವ ವೈಭೋಗ ವರ್ಣಿಸುತ್ತಿದ್ದರು. ನಾನು ಮಂಡ್ಯದ ಅಳಿಯನಾದ ಮೇಲೆ, ಗೆಳೆಯ ಕೆ.ಎಸ್.ಪುಟ್ಟಣ್ಣಯ್ಯ ಅವರ ಜೊತೆ ‘ಸರ್ವೋದಯ ಕರ್ನಾಟಕ’ ಪಕ್ಷ ಕಟ್ಟಿ ಇಲ್ಲಿ ಹೆಚ್ಚು ಓಡಾಡಿದ ಮೇಲೆ ನನಗೆ ತಿಳೀತು- ಇವರಿಗೂ ಇವರದೇ ಆದ ಕಷ್ಟ ಸುಖ, ದುಃಖ ದುಮ್ಮಾನಗಳು ಇವೆ ಅಂತ. ಈಗ ನಾನು ಮಾತಾಡಬೇಕಾಗಿರುವುದು ಇದಲ್ಲ. ಇಲ್ಲಿ ಹೆಚ್ಚಾಗಿ ನೀರು ಮಾತ್ರ ಹರಿಯುತ್ತಿಲ್ಲ. ಈ ನೆಲದಲ್ಲಿ ಕಣ್ಣಿಗೆ ಕಾಣದ ಒಳಿತಿನ ಅಂತರಜಲವೂ ಹರಿಯುತ್ತಿದೆ.
ಇದಕ್ಕೆ ಒಂದೆರಡು ಉದಾಹರಣೆ: ಇಸವಿ 1939. ಸ್ಥಳ: ಕೆರೆಗೋಡು ಪಕ್ಕದ ಹೊನಗಾನಹಳ್ಳಿ, ‘ಅಲ್ಲೊಬ್ಬರು ಪ್ರಜ್ಞೆ ಇರುವ ವ್ಯಕ್ತಿ ಪುಟ್ಟಣ್ಣ ಅಂತ. ಇವರು ತಮ್ಮ ಊರ ಕೆರೆಯಲ್ಲಿ ಅಸ್ಪೃಶ್ಯರೂ ನೀರು ಬಳಸುವಂತೆ ಮಾಡುತ್ತಾರೆ. ಆ ಊರಿನ ಜಾತಿ ಮೂಢಾತ್ಮರು ಪುಟ್ಟಣ್ಣನವರಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಅಂದು ಪುಟ್ಟಣ್ಣ ‘ಮನುಷ್ಯರಿಲ್ಲದ ಈ ಊರಲ್ಲಿ ನಾನು ಇರಲ್ಲ’ ಅಂತ ನಿರ್ಧರಿಸಿ ಹೇಮಗಿರಿಬೆಟ್ಟದಲ್ಲಿ ನೆಲೆಸುತ್ತಾರೆ. ಅಲ್ಲೊಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುತ್ತಾರೆ- ಇದು ಮಂಡ್ಯ ಮಣ್ಣೆಳಗೆ ಹರಿಯುತ್ತಿರುವ ಐಕ್ಯತೆಯ ಚೈತನ್ಯ
ಇನ್ನೊಂದು: ಇಸವಿ 1931ರ ರಾಜರ ಆಳ್ವಿಕೆಯ ಕಾಲ. ಸ್ಥಳ: ಸೋಮನಹಳ್ಳಿ, ಇಲ್ಲೊಂದು
ಧೀರೋದಾತ್ತ ಹೃದಯವಂತಿಕೆಯ ಚಿಲುಮೆ ಇದೇ ನೆಲದಿಂದ ಉಕ್ಕುತ್ತದೆ. ಇದಕ್ಕೆ ಕಾರಣರು ಎಸ್.ಸಿ.ಮಲ್ಲಯ್ಯ. ಇವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದರು. ಇವರು ‘ಒಕ್ಕಲಿಗರ ವಸತಿ ನಿಲಯ’ ಸ್ಥಾಪಿಸಿದ್ದರು. ಅಲ್ಲಿ ಅಸ್ಪೃಶ್ಯ ಮಕ್ಕಳನ್ನೂ ಜೊತೆಗೆ ಸೇರಿಸಿ ಅವರ ವಿದ್ಯಾಭ್ಯಾಸವನ್ನೂ ನೋಡಿಕೊಂಡಿದ್ದರು. ಅಷ್ಟೇ ಅಲ್ಲ, ಊರಾಚೆ ಇದ್ದ ಅಸ್ಪೃಶ್ಯರನ್ನು ತಮ್ಮ ಮನೆ ಎದುರಿಗಿನ ತಮ್ಮದೇ ಜಾಗ ನೀಡಿ ಸಹಬಾಳ್ವೆಯಿಂದ ಸಮಾನವಾಗಿ ವಾಸಿಸುವಂತೆ ಮಾಡಿದ್ದರು. ಗಾಂಧಿ ಈ ಊರಿಗೆ ಭೇಟಿ ನೀಡಿ ಬೆರಗಾಗುತ್ತಾರೆ. ಪಂಚಮರ ಪ್ರತ್ಯೇಕ ಶಾಲೆಯು ಕಷ್ಟಪಟ್ಟು ನಡೆಯುತ್ತಿದ್ದ ಆ ಕಾಲದಲ್ಲಿ ಬೆರೆತು ಒಳಗೊಳ್ಳುವ ಈ ಚೋದ್ಯ ಈ ಊರಲ್ಲಿ ಸಂಭವಿಸಿದೆ.
ಮತ್ತೊಂದು: ಕೋಡಳ್ಳಿ ಶಿವರಾಂ ಉಜ್ಜನಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಕೊಂಡ ಹಾಯುವುದನ್ನು ನೋಡಲು ಕರೆದೊಯ್ದಿದ್ದರು. ದಾರಿಯಲ್ಲಿ ಒಂದು ಸೇತುವೆ ಬಳಿ ಕಾರು ಗಕ್ಕನೆ ನಿಂತಿತು. ಕೆಳಕ್ಕೆ ಇಳಿದೆವು. ಶಿವರಾಂ ಹೇಳಿದರು: ಈ ಸೇತುವೆ ಕಟ್ಟಿದ ಕಂಟ್ರಾಕ್ಟರ್ ಸ್ವಾತಂತ್ರ್ಯ ಪೂರ್ವದ ನಿಡುಘಟ್ಟದ ಅಣ್ಣೆಗೌಡ. ಆ ಸೇತುವೆಯಲ್ಲಿ ಹುಳುಕು ಹುಡುಕಿ ಮೇಲಿನವರು ಒಂದಾಣೆ ದಂಡ ಹಾಕಿದಾಗ ಅವಮಾನ ತಾಳಲಾರದೆ ಸ್ವಾಭಿಮಾನಿ ಅಣ್ಣೆಗೌಡ ಆ ಸೇತುವೆಯಿಂದಲೇ ಕೆಳಕ್ಕೆ ಬಿದ್ದು ಪ್ರಾಣ ತ್ಯಜಿಸುತ್ತಾರೆ. ನಾನು ಸುಸ್ತಾಗಿ ಗಟ್ಟಿಮುಟ್ಟಾಗಿದ್ದ ಆ ಸೇತುವೆ ಮೇಲೆ ಕುಳಿತುಕೊಂಡೆ. ಒಂದೆರಡು ಸಿಗರೇಟು ಸೇದಿದೆ. ಇಂತವು ಎಷ್ಟೊ ಇನ್ನೆಷ್ಟೋ ಈ ನೆಲದೊಳಗೆ ಉಸಿರಾಡುತ್ತ ಕುಳಿತಿವೆ.
ಜೊತೆಗೇ ನಾವು ಕಂಡಂತೆ, ಸಾಂಸ್ಕೃತಿಕ ನಾಯಕರಾಗಿದ್ದ ಕೆ.ವಿ.ಶಂಕರೇಗೌಡರು ರಾಜಕಾರಣಿಯೂ ಆಗಿದ್ದರು. ಸಚಿವರಾಗಿ ನ್ಯಾಯವಂತಿಕೆಯ ಆಡಳಿತ ನಡೆಸಿದ್ದನ್ನು ಕಂಡಿದ್ದೇವೆ. ರಾಜ್ಯದ ಜನಪರ ಹೋರಾಟಗಳಿಗೆ ನಾಯಕತ್ವ ಕೊಟ್ಟ ಕೆ.ಎಸ್.ಪುಟ್ಟಣ್ಣಯ್ಯನವರ ಹೃದಯ ಬಡಿತಗಳೂ ಈ ನೆಲದಲ್ಲಿದೆ. ಹೀಗೆಲ್ಲಾ ಚೈತನ್ಯದ ಅಂತರಲ ಈ ಭೂಮಿಯಲ್ಲಿ ಹರಿಯುತ್ತಿದ್ದುದರಿಂದಲೇ, ಅಪ್ರತಿಮ ದೇಶಪ್ರೇಮಿ, ಕ್ರಾಂತಿಕಾರಿ ಆಡಳಿತಗಾರ ಟಿಪ್ಪು ಸುಲ್ತಾನ್ ವಿರುದ್ಧ ಚೇಷ್ಟೆಯ ಕಟ್ಟುಕತೆ ಉರಿಗೌಡ ನಂಜೇಗೌಡರನ್ನು ಭೂ ಬಿಟ್ಟಾಗ ಅವು ನೆಗೆದುಬಿದ್ದವು. ನಮ್ಮ ಸಂತರು ಹೇಳುವ- ‘ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ’- ಎಂಬ ಈ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ ಎಂದು ನನಗನ್ನಿಸುತ್ತಿದೆ.
ಇಂತಹ ನೆಲದಲ್ಲಿ, 1938ರಲ್ಲಿ ಶಿವಪುರ ಸ್ವಾತಂತ್ರ್ಯ ಧ್ವಜಸ್ಮಾರಕಕ್ಕೆ ನಾಕಾರು ಎಕರೆ ಭೂಮಿ ನೀಡಿದ ಈಡಿಗ ಸಮುದಾಯದ ಉದಾರ ವ್ಯಕ್ತಿ ಜೀವಿಸಿದ್ದ ಈ ಮಣ್ಣಲ್ಲಿ, ಧ್ವಜಾರೋಹಣ ಸಂದರ್ಭದಲ್ಲಿ ಮೊದಲ ಏಟುತಿಂದ ಧೀಮಂತ ಮಹಿಳೆಯ ಈ ನೆಲದಲ್ಲಿ- ಇತ್ತೀಚೆಗೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಬಂದು ಊರನ್ನು ಛಿದ್ರಗೊಳಿಸಿದೆ. ದೇವರು, ಧರ್ಮ, ಧ್ವಜ, ಬಣ್ಣ ಇವುಗಳನ್ನು ಹಣ ಮಾಡುವುದಕ್ಕೆ, ಅಧಿಕಾರ ಹಿಡಿಯುವುದಕ್ಕೆ ನಿಜಭಕ್ತಿ ಇಲ್ಲದ ಕೆಲವರು ದುರುಪಯೋಗ ಪಡಿಸಿಕೊಂಡ ಪರಿಣಾಮ ಇದು. ಛಿದ್ರತೆ, ಭಿನ್ನಬಾವ ಹೆಚ್ಚುತ್ತಿದೆ ಅಂದರೆ, ಯಾಕೋ ದೆವ್ವ, ಪಿಶಾಚಿಗಳು ಅಲ್ಲಿಗೆ ಎಂಟ್ರಿ ಕೊಟ್ಟಿವೆ ಅಂತಲೇ ಅರ್ಥ. ಮಂಡ್ಯ ನೆಲದಲ್ಲಿ ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ.
ನನಗೆ ಅನ್ನಿಸುವಂತೆ, ಇದಾಗಲು- ಜನತಾದಳ (ಜಾತ್ಯಾತೀತ) ಪಕ್ಷವು ಜಾತ್ಯಾತೀತವನ್ನು ತುಳಿದು, ‘ಚಾತುತ್ವರ್ಣ ಸಮಾಜವನ್ನೇ ತನ್ನ ದೇವರು’ ಅಂದುಕೊಂಡ ಆರ್‌ಎಸ್‌ಎಸ್‌ನ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡಿದ್ದು ಕಾರಣ; ಆ ಗಳಿಗೆಯಲ್ಲಿ ಅದರ ನೈತಿಕತೆ ಪತನವಾಯ್ತು. ಕೇವಲ ತಮ್ಮ ಹತ್ತು ತಿಂಗಳ ಪ್ರಧಾನಮಂತ್ರಿ ಅವಧಿಯಲ್ಲಿ ನೆನಪಲ್ಲಿಡುವಂತಹ ಕಾರ್ಯ ನಿರ್ವಹಿಸಿದಂತಹ ಮುತ್ಸದ್ಧಿ ಹೆಚ್.ಡಿ.ದೇವೇಗೌಡರ ಪಕ್ಷಕ್ಕೆ ಈ ಅವನತಿ ಬರಬಾರದಿತ್ತು. ಈಗ ಜನತಾದಳದ ಬೆನ್ನ ಮೇಲೆ, ತಲೆ ಮೇಲೆ ಸಂಘ ಪರಿವಾರದ ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ. ಕೆರಗೋಡು ಪ್ರಕರಣ ಉಂಟಾಗಿದೆ.
ಈ ಕೆರಗೋಡು ಪ್ರಕರಣಕ್ಕೆ ನನಗೆ ಅನ್ನಿಸುವುದಿಷ್ಟೇ- “ಅದನ್ನು ನೋಡುವುದು ಬೇಡ. ನಮ್ಮನ್ನು ನಾವು ನೋಡಿಕೊಳ್ಳೋಣ. ನನ್ನನ್ನೂ ಸೇರಿ ನಾವೆಲ್ಲರೂ ಏನೇನೋ ಮಾಡಬೇಕಿತ್ತೊ, ಎಷ್ಟೆಷ್ಟೋ ಮಾಡಬೇಕಿತ್ತೊ ಅವುಗಳನ್ನು ಮಾಡಲಿಲ್ಲ. ಅದಕ್ಕೆ ಕೆರಗೋಡು ಪ್ರಕರಣ ನಡೆದಿದೆ. ಅವರು ಪಂಜು ಹಿಡಿದುಕೊಂಡು ಸಮಾಜದಲ್ಲಿ ಬೆಂಕಿ ಹಂಚಲು ಬಂದರೆ, ನಾವು ಮನೆಮನೆಗಳಲ್ಲಿ ಸಹಬಾಳ್ವೆಯ ಹಣತೆಯ ಬೆಳಕು ಬೆಳಗಿಸೋಣ.
ಹಾಗೆ ಇನ್ನೊಂದು ಮಾತು- ನಂನಮ್ಮ ಸಂಘಟನೆಗಳು ಹೋರಾಡುವುದು, ಬೇಡಿಕೆ ಇಡುವುದು ಎಲ್ಲವೂ ತಾವು ಪ್ರತಿನಿಧಿಸುವ ಸಮುದಾಯಗಳದು ಮಾತ್ರ. ಇದರಾಚೆಗೆ ನಾವು ನೋಡಿದ್ದೀವಾ? ಹಾಗಾದರೆ, ‘ಹೇಳುವವರು. ಕೇಳುವವರು ಯಾರೂ ಇಲ್ಲದವರಿಗೆ ಯಾರೂ ಇಲ್ಲವಾ?’ ಉದಾಹರಣೆಗೆ- ನಮ್ಮೆಲ್ಲರಿಗೂ ಮಾತಾಪಿತೃಗಳಾದ ಬುಡಕಟ್ಟು ಆದಿವಾಸಿಗಳಿಗೆ ವಿಧಾನಸಭೆಯಲ್ಲಿ ಹಾಗೂ ಜನಪ್ರತಿನಿಧಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ. ಜೊತೆಗೆ ಒಂದು ನಿಗಮವಾದರೂ ಕನಿಷ್ಠ ಇರಬೇಕಿತ್ತಲ್ಲವೆ? ಹೀಗೆಯೇ ಅಲೆಮಾರಿ, ಪೌರಕಾರ್ಮಿಕ, ದೇವದಾಸಿ ಹಿನ್ನೆಲೆಯ ಸಮುದಾಯಗಳಿಗೂ ಕೂಡ. ಇವರ ಸಮಸ್ಯೆ ನಮ್ಮ ಸಮಸ್ಯೆಯೂ ಆಗಬೇಕು. ಆಗ ನಾವು ಸಂವೇದನಾಶೀಲತೆ ಪಡೆದುಕೊಳ್ಳುತ್ತೇವೆ. ಇವು ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ನಮ್ಮ ಸೈದ್ಧಾಂತಿಕತೆಯ ಬುಡ ಭದ್ರವಾಗುತ್ತದೆ. ಅದಕ್ಕಾಗಿ ನಮ್ಮ ಮೊದಲ ಆದ್ಯತೆಯ ಡಿಮ್ಯಾಂಡ್‌ಗಳು ಇವಾಗಿ, ತದನಂತರ ನಮ್ಮವು ಎಂಬ ಅಂತಃಕರಣ ನಮ್ಮದಾಗಬೇಕಿದೆ.
ನಮ್ಮ ಸಮಸ್ಯೆಗಳ ಸರಮಾಲೆಗಳ ಜೊತೆಗೆ ಮುಂದೆ ಕೆಲವೇ ದಿನಗಳಲ್ಲಿ 2024ರ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಆರ್‌ಎಸ್‌ಎಸ್‌ನ ಗುರು ಶ್ರೀ ಗೋಳ್ವಾಲ್ಕರ್ “ಚಾತುರ್ವಣ್ರ ಸಮಾಜವೇ ದೇವರು” ಎಂದು ಹೇಳುತ್ತಾರೆ. ಇದನ್ನೆ ಸಾವರ್ಕರ್ ‘ಹಿಂದುತ್ವ’ ಅನ್ನುತ್ತಾರೆ. ಕೇಂದ್ರ ಸರ್ಕಾರ ಇದನ್ನೆ ಅನುಷ್ಠಾನ ಮಾಡಲು ಹೊರಟಿರುವುದು. ಒಟ್ಟಿನಲ್ಲಿ ಒಕ್ಕಲುತನದ ಶೂದ್ರರು ಅನ್ನಿಸಿಕೊಂಡವರು, ದುಡಿಯುವ ಜನರು ಮೇಲಿನವರಿಗೆ ಸೇವಕರಾಗಿರಬೇಕು, ಕಾಲಾಳುಗಳಾಗಿರಬೇಕು ಎಂಬುದೇ ಇವರ ಮರ್ಮ. ಇದನ್ನು ನಾವು ಎಲ್ಲರಿಗೂ ಮನದಟ್ಟು ಮಾಡಬೇಕಿದೆ.
ಜೊತೆಗೆ ಇಂತಹ ಆರ್‌ಎ್ರಸ್ಎಸ್‌ನ ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ- ಮೊದಲು ಜನ ಸಮುದಾಯಗಳಿಗೆ ದನಿ ಕೊಡುವ, ಆಸರೆಯಾಗುವ ಜನಾಂದೋಲನಗಳ ಕಾಲು ಕತ್ತರಿಸಲಾಗುತ್ತದೆ. ಈಗಾಗಲೇ ಕುಂಟುತ್ತ ನಡೆಯುತ್ತಿರುವ ಮಾಧ್ಯಮಗಳು ತೆವಳುತ್ತ ನಡೆಯುವಂತೆ ಮಾಡಲಾಗುತ್ತದೆ. ಆಡಿದ್ದೇ ಆಟ ನಡೆದಿದ್ದೇ ದಾರಿ ಎಂಬಂತೆ ಒಂಟಿ ಸಲಗನಂತೆ ತುಳಿದುಕೊಂಡು ಓಡಾಡುತ್ತಿರುವ ಈ ಆರ್‌ಎಸ್‌ಎಸ್ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉಳಿಗಾಲ ಉಂಟೆ?
ಕೊನೆಯದಾಗಿ ಮಂಡ್ಯಕ್ಕೆ ಒಂದು ಕಿವಿಮಾತು- ಹೊನಗಾನಹಳ್ಳಿಯ ಅತಂತ್ರ ಮಹಾತ್ಮ ಪುಟ್ಟಣ್ಣ ಊರು ಬಿಟ್ಟು ಬೆಟ್ಟ ಸೇರಿಕೊಂಡರಲ್ಲಾ, ಅಂತಹದೇ ವ್ಯಕ್ತಿತ್ವದ ವ್ಯಕ್ತಿಯೊಬ್ಬ ಈಗ ಕೋಲಾರದ ತೇರಹಳ್ಳಿ ಬೆಟ್ಟದಿಂದ ಮೇಲುಕೋಟೆ ಬೆಟ್ಟಕ್ಕೆ ಬಂದು ಸೇರಿಕೊಂಡಿದ್ದಾನೆ. ಇವನ ಹೆಸರು ಕೆ.ರಾಮಯ್ಯ. ಇವನು ಇನ್ನೊಂದು ಬೆಟ್ಟಕ್ಕೆ ಜಿಗಿಯುವ ಮುನ್ನ, ಬಲೆ ಹಾಕಿ ಬಂಧಿಸಿಟ್ಟುಕೊಳ್ಳಿರಿ. ಇವಗೆ ನೆಲಕ್ಕೆ ಕಿವಿಗೊಟ್ಟು ಆಲಿಸಿ ಆ ಸ್ಪಂದನಗಳಿಗೆ ಆಕಾರ ಕೊಡುವ ಸಿದ್ದಿ ಇರುವಂತಿದೆ. ಇವನಿಂದ ಮಂಡ್ಯದ ನೆಲದಲ್ಲಿ ಅಂತರಗಂಗೆಯಾಗಿ ಹರಿಯುತ್ತಿರುವ ಚೈತನ್ಯಗಳ ಜೀವಂತ ಕತೆಗಳು ಮಕ್ಕಳ ಪುಸ್ತಿಕೆಗಳಾಗಿ ಮೂಡಿ ಬರಲಿ, ಈ ತುತ್ತು ಕೊಟ್ಟು ಮಕ್ಕಳನ್ನು ಬೆಳೆಸಿದರೆ ನಾಳೆ ಮಂಡ್ಯ ಬೆಳಗುತ್ತದೆ. -purushottama bilimale