

ಸಿದ್ದಾಪುರ: ಅಮರ ಪುನೀತ್ ಕನ್ನಡ ಕಲಾವೇದಿಕೆ ಸಿದ್ದಾಪುರ, ಸಮೃದ್ಧಿ ಯುವ ಬಳಗ ಹಾಗೂ ತ್ಯಾರ್ಸಿಯ ಗ್ರಾಮಸ್ಥರ ಆಶ್ರಯದಲ್ಲಿ ತಾಲೂಕಿನ ತ್ಯಾರ್ಸಿಯಲ್ಲಿ ರವಿವಾರ ರಾತ್ರಿ ಕನ್ನಡ ಕಲರವ, ಶಾಸಕರಿಗೆ ಅಭಿನಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಾಸಕ ಭೀಮಣ್ಣ ನಾಯ್ಕ ಹಾಗೂ ಗಣ್ಯರನ್ನು ತ್ಯಾರ್ಸಿಯ ಬಸ್ ನಿಲ್ದಾಣದಿಂದ ಕಾಳಿಕಾಂಬಾ ದೇವಸ್ಥಾನದವರೆಗೆ ಊರಿನ ಮಹಿಳೆಯರ ಪೂರ್ಣಕುಂಭ ಹಾಗೂ ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ಕಾಳಿಕಾಂಬಾ ಕಲಾವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಅಮರ ಪುನೀತ್ ಕನ್ನಡ ಕಲಾವೇದಿಕೆ ಹಾಗೂ ಸಮೃದ್ಧಿ ಯುವ ಬಳಗದ ವತಿಯಿಂದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಅಭಿನಂದಿಸಲಾಯಿತು. ನಂತರ ಸಾಮಾಜಿಕ ಕ್ಷೇತ್ರದಲ್ಲಿ ಕೆ.ಜಿ.ನಾಗರಾಜ, ವೈದ್ಯಕೀಯ ಕ್ಷೇತ್ರದ ಡಾ. ಶ್ರೀಧರ ವೈದ್ಯ, ಕನ್ನಡಪರ ಸಂಘಟನೆಯ ಕೃಷ್ಣಮೂರ್ತಿ ನಾಯ್ಕ ಐಸೂರ, ಅಣ್ಣಪ್ಪ ನಾಯ್ಕ ಶಿರಳಗಿ, ಅನಿಲ್ ಕೊಠಾರಿ, ರವಿಕುಮಾರ ಕೊಠಾರಿ, ಅರಣ್ಯ ಅತಿಕ್ರಮಣ ಹೋರಾಟಗಾರ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕಲಾ ಕ್ಷೇತ್ರದ ಮಧುಕೇಶ್ವರ ಗುಡ್ನಾಪುರ, ಉಮೇಶ ನಾಯ್ಕ ತ್ಯಾರ್ಸಿ, ಎಚ್.ಟಿ.ವಾಸು ಕಡಕೇರಿ, ಕೃಷ್ಣ ನಾಯ್ಕ ಕೊಪ್ಪ, ಜಿ.ಎನ್.ಹೆಗಡೆ ಮದ್ದಿನಕೇರಿ, ಗಣಪತಿ ಕೊಂಡ್ಲಿ ಹಾಗೂ ರವಿ ಹಿತ್ಲಳ್ಳಿ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಕಲರವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,
ಕೋಟ್ಯಂತರ ಹೃದಯಗಳು ಸದಾ ಸ್ಮರಿಸುತ್ತಿರುವ ಪುನೀತ್ ರಾಜಕುಮಾರ ಹೆಸರಿನಲ್ಲಿ ಕಲಾ ವೇದಿಕೆ ಕಟ್ಟಿಕೊಂಡು ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವ ಅಮರ ಪುನೀತ್ ಕನ್ನಡ ಕಲಾವೇದಿಕೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು. ಪುನೀತ ರಾಜಕುಮಾರರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ. ತ್ಯಾರ್ಸಿಯ ಗ್ರಾಮಸ್ಥರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಸದಾ ಚಿರ ಋಣಿಯಾಗಿರುತ್ತೇನೆ. ಈ ಕ್ಷೇತ್ರದಲ್ಲಿ ಗೆದ್ದಿದ್ದು ಭೀಮಣ್ಣ ಅಲ್ಲ. ಶಿರಸಿ-ಸಿದ್ದಾಪುರ ಕ್ಷೇತ್ರದ ಸಮಸ್ತ ಜನತೆ. ಎಲ್ಲರೂ ಸೇರಿ ಕಲೆಯನ್ನು ಬೆಳೆಸುವ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಮರ ಪುನೀತ್ ಕನ್ನಡ ಕಲಾವೇದಿಕೆ ಅಧ್ಯಕ್ಷ ವಿನಾಯಕ ಕೊಂಡ್ಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಪುನೀತ್ ರಾಜಕುಮಾರ ಹೆಸರಿನಲ್ಲಿ ಸಂಘ ರಚಿಸಿ ನಾಡಿನ ವಿವಿಧೆಡೆ ನಾಟಕ ಪ್ರದರ್ಶನ ನಡೆಸಿದ್ದೇವೆ. ಪುನೀತ್ ನಿಧನದ ನಂತರ ಅಮರ ಪುನೀತ್ ಕನ್ನಡ ಕಲಾವೇದಿಕೆ ಎಂದು ಸೇರಿಸಲಾಗಿದೆ. ಕನ್ನಡವನ್ನು ಉಳಿಸಲು ಸಂಘದಿಂದ ಪ್ರಯತ್ನ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ-ಮಾನ ವೃದ್ಧಿಸಬೇಕು ಎಂದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ವಕೀಲ ಜಿ.ಟಿ.ನಾಯ್ಕ, ಸಾಮಾಜಿಕ ಮುಖಂಡ ಕೆ.ಜಿ.ನಾಗರಾಜ, ಡಾ.ಶ್ರೀಧರ ವೈದ್ಯ, ಬೇಡ್ಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ಗೌಡರ್, ರೈತ ಮುಖಂಡ ವೀರಭದ್ರ ನಾಯ್ಕ, ತ್ಯಾರ್ಸಿ ಗ್ರಾಮದ ಮುಖ್ಯಸ್ಥ ಮಾರುತಿ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಸಂವಿಧಾನ ಓದು ಸಮಿತಿಯ ರಾಜ್ಯ ಸದಸ್ಯ ಎನ್.ಟಿ.ನಾಯ್ಕ, ಎಸ್.ಕೆ.ನಾಯ್ಕ ಕಡಕೇರಿ, ಮಂಜುನಾಥ ನಾಯ್ಕ ತ್ಯಾರ್ಸಿ, ವಕೀಲ ಎ.ಆರ್.ನಾಯ್ಕ, ಕಾಳಿಕಾಂಬಾ ದೇವಾಲಯದ ಅಧ್ಯಕ್ಷ ನಾರಾಯಣ ನಾಯ್ಕ, ಕನ್ನಡಪರ ಹೋರಾಟಗಾರರಾದ ಎನ್.ಬಿ.ಕುಮಾರ, ಆಂಜನೇಯ ಹಾವೇರಿ ಉಪಸ್ಥಿತರಿದ್ದರು. ಅಶೋಕ ನಾಯ್ಕ ತ್ಯಾರ್ಸಿ ನಿರೂಪಿಸಿದರು.
ಉಪನ್ಯಾಸಕ ಎನ್.ಟಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಕೀಲ ರವಿಕುಮಾರ ನಾಯ್ಕ ಚೆನಮಾಂವ್ ಸ್ವಾಗತಿಸಿದರು.
