


ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಅಧಿಕಾರಿ ವರ್ಗ, ರಾಜಕೀಯ ಮುಖಂಡರ ಬೆಸುಗೆಯಿಂದ ನಡೆಯುತಿದ್ದ ಮರಳುಮಾಫಿಯಾವನ್ನು ಹೊರಗೆಳೆಯುವಲ್ಲಿ ಜಿಲ್ಲೆಯ ಹೊಸ ಅಧಿಕಾರಿಣಿಯೊಬ್ಬರು ಯಶಸ್ವಿಯಾಗಿರುವ ಪ್ರಕರಣ ಚರ್ಚೆಗೆ ಕಾರಣವಾಗಿದೆ.
ಕೆಲವು ರಾಜಕೀಯ ನಾಯಕರ ಪೃಪಾಕಟಾಕ್ಷದಿಂದ ಕೆಲವು ಅಕ್ರಮ ಚಟುವಟಿಕೆಗಳು ನಡೆಯುವುದು ಮಾಮೂಲು ಆದರೆ ಈ ಪ್ರಕರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನೇ ಬಳಸಿ ಕೆಲವು ಚತುರರು ಹಗಲು ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಂತಾಗಿದೆ.
ಶಿರಸಿಯ ಯುವ ರಾಜಕಾರಣಿಯೊಬ್ಬ ಹೊನ್ನಾವರ ಮೂಲದ ಪೋಲೀಸ್ ಪೇದೆ ಸೇರಿದ ನಾಲ್ಕೈದು ಜನರ ಕೂಟ ಸರ್ಕಾರಕ್ಕೆ ರಾಯಲ್ಟಿ ಕೊಡದೆ ರಾಜಾರೋಶವಾಗಿ ನಾಲ್ಕೈದು ವರ್ಷಗಳಿಂದ ಹೊನ್ನಾವರ ತಾಲೂಕಿನಿಂದ ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುತಿದ್ದರು.
ಈ ಅಕ್ರಮ ದಂಧೆಯ ನೆರವಿನಿಂದ ಪ್ರಭಾವಿ ರಾಜಕಾರಣಿಗಳ ಸ್ನೇಹ ಸಂಪಾದಿಸಿ ಪಕ್ಷ, ವೇದಿಕೆಯಲ್ಲಿ ಸ್ಥಾನ ಗಿಟ್ಟಿಸುತಿದ್ದ ಯುವ ರಾಜಕಾರಣಿ ರಾಜ್ಯದ ಉಪಮುಖ್ಯಮಂತ್ರಿಗಳ ಹೆಸರು ಹೇಳಿಕೊಂಡು ಅಧಿಕಾರಿಗಳು, ಕೆಲವು ಮುಖಂಡರಿಗೂ ಹೆದರಿಸುತ್ತಿರುವ ಬಗ್ಗೆ ಈಗಲೂ ಗುಸು ಗುಸು ಕೇಳಿ ಬರುತ್ತಿದೆ.

ಶಿರಸಿಯ ಇದೇ ಯುವ ಮುಖಂಡ ಸ್ಥಳೀಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿದರೆ ತನ್ನ ಖಾಸಗಿ ಅಕ್ರಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೆರವು ಪಡೆದು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತಿದ್ದಾನೆ ಎನ್ನುವ ಗುರುತರ ಆರೋಪಗಳಿವೆ.
ಈಗಲೂ ಸರ್ಕಾರ, ಉಪಮುಖ್ಯಮಂತ್ರಿಗಳ ಹೆಸರು ಹೇಳಿಕೊಂಡು ತನ್ನ ವ್ಯವಹಾರಕ್ಕೆ ಅನುಕೂಲಮಾಡಿಕೊಡಲು ಶ್ರಮಿಸಿದ ಈ ಯುವ ಅಧ್ಯಕ್ಷನಿಗೆ ಚುನಾವಣಾ ನೀತಿ ಸಂಹಿತೆ ಬಗನಿ ಗೂಟ ಜಡಿದಿದೆ. ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬಂದ ಹೊಸ ಅಧಿಕಾರಿ ಇಂದು ಮುಂಜಾನೆ ಈ ಯುವ ಮುಖಂಡನ ನವರಂಧ್ರಗಳಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ.
ತನ್ನ ಎರಡು ವಾಹನ ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಎರಡು ಬೇನಾಮಿ ವಾಹನ ಇವುಗಳೊಂದಿಗೆ ಇವರ ಸ್ನೇಹಿತರ ಎರಡು ಲಾರಿಗಳಿಗೆ ಸ್ಕೆಚ್ ಹಾಕಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ತನ್ನ ರಾಜಕೀಯ ಶಕ್ತಿ ತೋರಿಸಲು ಹೋದ ಈ ಮುಖಂಡನಿಗೆ ಅಧಿಕಾರಿಗಳು ನೀನ್ಯಾರಾದರೇನು? ಸರ್ಕಾರ, ನಿಯಮಗಳ ಮುಂದೆ ನಿನ್ನ ಪುಡಿ ರಾಜಕಾರಣ ನಡೆಯಲ್ಲ ಎಂದು ಗದುಮಿದ್ದಾರೆ. ಲಾಗಾಯ್ತಿನ ಚೋರ ಬುದ್ಧಿಯಂತೆ ರಾಜಕಾರಣ ಮಾಡಲು ನೀತಿ ಸಂಹಿತೆ ಅಡ್ಡ ಬಂದಿದೆ. ಸಾವಿರ ಲೆಕ್ಕದಲ್ಲೂ ಮತಗಳಿರದ ಈ ಪುಡಿ ನಾಯಕರ ಅಕ್ರಮ ಚಟುವಟಿಕೆ ಪಕ್ಷ, ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವ ಬಗ್ಗೆ ಆತಂಕಗೊಂಡಿರುವ ಸ್ವಪಕ್ಷೀಯರು, ವಿರೋಧ ಪಕ್ಷದ ಕೆಲವು ಮುಖಂಡರ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಇವರ ಕುಲಬಾಂಧವರೇ ಇಂಥ ಅಕ್ರಮ ವ್ಯವಹಾರಗಳಿಂದ ಶಿರಸಿ ಶಾಸಕರು, ಸರ್ಕಾರ ಮತ್ತು ಜಿಲ್ಲಾ ಕಾಂಗ್ರೆಸ್ ಗಳಿಗೆ ಕಂಟಕಪ್ರಾಯರಾಗಿರುವ ಬಗ್ಗೆ ತೀವ್ರ ವಿರೋಧ ಕೂಡಾ ವ್ಯಕ್ತವಾಗಿದೆ.
