
ಮಲೆನಾಡೆಂದರೆ.. ಭೂಪಟದಲ್ಲಿ ಬೆಟ್ಟ, ನೀರು, ಗಿರಿ ವೃಕ್ಷಗಳ ಚಿತ್ರ. ಆದರೆ ಮಲೆನಾಡೆಂದರೆ ಇವುಗಳಿಗೂ ಮೀರಿದ ವಿಶೇಶ ಜೀವನ ಶೈಲಿಯ ತಾಣ ಎಂಬುದು ಅನೇಕರಿಗೆ ತಿಳಿದಿಲ್ಲ. ಮಲೆನಾಡಿನಲ್ಲಿ ಮಳೆ ಬಂತೆಂದರೆ ಅದು ಸುಮಧುರ ಹಾಡಿನಂತೆ ಅಬ್ಬರವಿಲ್ಲದೆ ಸುರಿದರೆ ಸಂಗೀತ,ಸಾಹಿತ್ಯದ ಖುಷಿ ನೀಡಬಲ್ಲದು ಅದೇ ರುದ್ರನರ್ತನಕ್ಕಿಳಿದರೆ ಭೂಮಿ,ಬದುಕು ನಲುಗತೊಡಗುತ್ತದೆ. ಈ ಕಾರಣಕ್ಕೇ ಮಲೆನಾಡಿನಲ್ಲಿ ಮಳೆಗಾಲವೆಂದರೆ ಕಭಿ ಕುಷಿ ಕಭಿ ಗಮ್.
ಕರ್ನಾಟಕವನ್ನು ಆಳಿದ ತುಂಡರಸರಲ್ಲಿ ಬಿಳಗಿ ಅರಸರ ಮನೆತನವೂ ಒಂದು. ಈ ಬಿಳಗಿ ಕೋಟೆ ವ್ಯಾಪ್ತಿಯ ಕಂಡುಮನೆ ಎನ್ನುವ ಈ ಗ್ರಾಮವೇ ಮಲೆನಾಡಿನ ಜನಜೀವನ, ಸಾಹಸಕ್ಕೆ ಸಾಕ್ಷಿ. ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಎನ್ನುವಂತೆ ಬಿಳಗಿ ಕೇಂದ್ರದಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದ ಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮ ತಾಲೂಕು ಕೇಂದ್ರ ಸಿದ್ಧಾಪುರ ದಿಂದ ಬಹುದೂರದಲ್ಲಿಲ್ಲ. ಆದರೆ ಈಗ್ರಾಮಕ್ಕೆ ಸರ್ವ ಋತು ರಸ್ತೆ ಇಲ್ಲದಿರುವುದರಿಂದ ಕಂಡುಮನೆ ಜೊತೆಗೆ ಇಲ್ಲಿಂದ ಕಾಲುದಾರಿಯಲ್ಲಿ ಹೋಗುವ ಅರ್ಧ ಡಜನ್ ಗೂ ಹೆಚ್ಚಿನ ಗ್ರಾಮಗಳಿಗೆ ಮಳೆಗಾಲವೆಂದರೆ ಶಿಕ್ಷೆ.
ತೋಟ, ಭತ್ತದ ಗದ್ದೆ ಬಳಸಿ ಸಾಗುವ ಹೆಮ್ಮನಬೈಲು ಕಂಡುಮನೆ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಅನಾನುಕೂಲಕರ ಇರುವುದರಿಂದ ಮಳೆಗಾಲದ ಮೂರು ತಿಂಗಳು ಈ ಗ್ರಾಮಗಳಿಗೆ ವಾಹನ ಸಂಚಾರ ಇರುವುದಿಲ್ಲ. ಮನುಷ್ಯ ಸುಲಭವಾಗಿ ಹೊತ್ತೊಯ್ಯುವ ವಸ್ತುಗಳನ್ನು ಬಿಟ್ಟು ವಾಹನದಿಂದ ತರುವ ವಸ್ತು,ಸಲಕರಣೆಗಳನ್ನು ಮಳೆ ಬರುವ ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೆಂದು ಶಾಲೆ, ಸಂತೆ, ಇತರ ಅಗತ್ಯಗಳಿಗೂ ಪೇಟೆ, ನಗರಕ್ಕೆ ಬರದಿದ್ದರೆ ಹ್ಯಾಗೆ ಹೇಳಿ. ಇಲ್ಲಿಯ ಜನ ಅನಿವಾರ್ಯ ಪ್ರಸಂಗಗಳಲ್ಲಿ ಅನಾರೋಗ್ಯಕ್ಕೀಡಾದವರನ್ನು ಮೈಮೇಲೆ ಹೊತ್ತೇ ಸಾಗಿಸಬೇಕು. ಇರುವ ಒಂದು ಕಾಲು ಸಂಕದ ಚಿಕ್ಕ ಸೇತುವೆ ಕೂಡಾ ಮಳೆನೀರಿನಲ್ಲಿ ಕೊಚ್ಚಿಹೋಗುವಂತಿದೆ.
ಇಂಥ ಹಲವು ಸಮಸ್ಯೆಗಳ ಬೀಡಾಗಿರುವ ಈ ಹಳ್ಳಿಗೆ ನಾಗರಿಕ ಸೌಲಭ್ಯ ಒದಗಿಸಬೇಕೆಂದು ಈ ಹಳ್ಳಿಗಳ ಜನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇಂಥ ನೂರಾರು ಹಳ್ಳಿಗಳಿರುವ ಉತ್ತರ ಕನ್ನಡ ಜಿಲ್ಲೆ ಮಲೆನಾಡಿನ ಮಳೆಗಾಲದ ತೊಂದರೆಗೆ ಜ್ವಲಂತ ಸಾಕ್ಷಿ. ಇಂಥ ಗ್ರಾಮಗಳಿಗೆ ಮಳೆನೀರು, ಪ್ರವಾಹ ನುಗ್ಗಿದರೆ ಕಾಡೊಳಗೆ ಮನೆ ಮಾಡಿ ಮಳೆ-ಪ್ರವಾಹಕ್ಕೆ ಅಂಜಿದೊಡೆಂತಯ್ಯ ಎನಬಹುದೆ? ಇದು ಮಲೆನಾಡ ಮಳೆಗಾಲದ ಬದುಕಿಗೆ ಒಂದು ದೃಷ್ಟಾಂತ ಮಾತ್ರ.
ಉಕ್ಕಿ ಹರಿದ ಅಘನಾಶಿನಿ: ಮುಳುಗಿದ ಸರ್ಕುಳಿ
…….
ಕಳೆದ ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರಿನ ಪ್ರವಾಹ ಒಂದೇ ಸಮನೆ ಏರಿಕೆಯಾಗಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶವಾದ ಸರಕುಳಿ ನೀರಿನ ಪ್ರವಾಹಕ್ಕೆ ಸಿಲುಕಿದೆ.
ಗುರುವಾರ ಸಂಜೆಯವರೆಗೂ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದ ನೀರು ರಾತ್ರಿಯ ವೇಳೆ ಅಪಾಯದ ಮಟ್ಟದಲ್ಲಿ ಹರಿದಿದೆ. ಇದರಿಂದಾಗಿ ಇಲ್ಲಿ ಮಹಿಷಾಸುರ ಮರ್ಧಿನಿ ದೇವಾಲಯದ ಒಳಗೆ ನೀರು ನುಗ್ಗಿದೆ.
ಇಲ್ಲಿಯ ಶ್ರೀಧರ ನಾಯ್ಕ ಅವರ ಮನೆಯೊಳಗೆ ಸೊಂಟದಷ್ಟೆತ್ತರಕ್ಕೆ ನೀರು ಹರಿದಿದ್ದು, ಮನೆಯಲ್ಲಿರುವ ಸಾಮಾನು ಸರಂಜಾಮುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಹೊರ ಸಾಗಿಸಲಾಯಿತು. ಇಲ್ಲಿಯ ಗಣಪತಿ ಶೆಟ್ಟಿ ಅವರ ಮನೆ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಡೆಯಾಗಿ ಮನೆಯೊಳಗಿರುವ ವಸ್ತುಗಳೆಲ್ಲ ಕೊಚ್ಚಿಹೋಗಿವೆ. ಅಘನಾಶಿನಿ ಪ್ರವಾಹದಿಂದಾಗಿ ಇಲ್ಲಿಯ ಅನೇಕ ಮನೆಗಳ ನಿವಾಸಿಗಳು ಅನಿವಾರ್ಯವಾಗಿ ಮನೆ ಬಿಡುವಂತಾಗಿವೆ.
ದೇವಾಲಯದಲ್ಲೇ ಸಿಲುಕಿದ ಅರ್ಚಕರು..
ಇಲ್ಲಿಯ ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಗಣಪತಿ ಭಟ್ ದೇವಾಲಯದೊಳಗೇ ಸಿಲುಕಿ ಸ್ಥಳೀಯರು ಆತಂಕ ಪಡುವಂತಾಯಿತು.
ದೇವಾಲಯದ ಆವರಣದಲ್ಲಿ ಇರುವ ಅವರ ಮನೆಯಲ್ಲಿ ಗಣಪತಿ ಭಟ್ ಇದ್ದರಾದರೂ ಕೆಲವೇ ಕ್ಷಣದಲ್ಲಿ ನೀರು ಏರಿಕೆ ಆಗಿದ್ದರಿಂದ ಅವರಿಗೆ ಹೊರ ಬರಲು ಸಾಧ್ಯವಾಗಲಿಲ್ಲ. ಮುಂದಿನ ಕೆಲ ಕ್ಷಣಗಳಲ್ಲಿ ನೀರಿನ ಪ್ರವಾಹ ಏರಿಕೆಯಾಗಿ ಮನೆಯ ಮೊದಲ ಮಹಡಿ ಮುಳುಗಡೆಯಾಗಿದೆ. ಗಣಪತಿ ಭಟ್ ಅವರು ಶ್ರಮ ಪಟ್ಟು ಮನೆಯ ಮೆತ್ತು ಏರಿ ಆ ಕ್ಷಣಕ್ಕೆ ತಮ್ಮನ್ನು ರಕ್ಷಿಸಿಕೊಂಡಿದ್ದರು. ಆದರೆ, ನೀರಿನ ಪ್ರಮಾಣ ಇನ್ನೂ ಏರುತ್ತಿದ್ದುದರಿಂದ ಸ್ಥಳೀಯರು ಇನ್ನಷ್ಟು ಆತಂಕಕ್ಕೆ ಒಳಗಾದರು.
ಈ ವೇಳೆ ಸ್ಥಳೀಯರು ರಕ್ಷಣೆಗಾಗಿ ತಾಲೂಕು ಆಡಳಿತವನ್ನು ಸಂಪರ್ಕಿಸಿದರೂ, ಅವರು ಆಗಮಿಸುವುದು ತಡವಾಗಲಿದೆ ಎಂದು ಅರಿತ ಸ್ಥಳೀಯರು ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಧುಮುಕಿ ಈಜಿ ಗಣಪತಿ ಭಟ್ ಅವರ ಮನೆ ಮಹಡಿ ಏರಿದ್ದಾರೆ. ಬಳಿಕ ಮಹಡಿಯ ಹೆಂಚು ತೆಗೆದು ಗಣಪತಿ ಭಟ್ ಅವರನ್ನು ರಕ್ಷಿಸಿದ್ದಾರೆ.

