

ನಿಸ್ಸಂಶಯವಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ IAS. ಒಬ್ಬ ಸರಕಾರಿ ಅಧಿಕಾರಿ ಜನಸೇವಕನಾಗಿ, ಮಾದರಿ ಕೃಷಿಕನಾಗಿ, ಯುವಜನತೆಯ ಸ್ಫೂರ್ತಿ ದೇವತೆಯಾಗಿ ನಿಲ್ಲುತ್ತಾರೆ ಅಂದರೆ ಅವರು ನಿಜಕ್ಕೂ ಗ್ರೇಟ್!

ಕೊರೋನಾ ವಿರುದ್ಧ ಉಡುಪಿ ಜಿಲ್ಲೆ ಇಂದು ಒಂದು ಹಂತದ ಸಮರವನ್ನು ಗೆದ್ದಿದೆ. ಅದಕ್ಕೆ ಈ ಅಧಿಕಾರಿ ಮಾಡಿದ ಹೋರಾಟ, ಜಾಗೃತಿಯ ಕಾರ್ಯಕ್ರಮಗಳು, ಕಡಕ್ ಆದೇಶಗಳು ಮತ್ತು ಅನುಷ್ಠಾನಗಳು ಕಾರಣ ಎಂಬ ಜನಾಭಿಪ್ರಾಯ ಮೂಡಿಬರುತ್ತಿದೆ. ಅದಕ್ಕೆ ಅವರಿಗೆ ಅಭಿನಂದನೆಗಳು.
ಜಿ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆ ಗ್ರಾಮದವರು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಪದವಿ ಪಡೆದವರು. ಮುಂದೆ ಬಿ. ಎಡ್. ಮಾಡಿ ಕಡೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.ನಂತರ ಸ್ವಂತ ಆಸಕ್ತಿಯಿಂದ ರಾಜನೀತಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು KAS ತೇರ್ಗಡೆ ಹೊಂದಿದರು. 2006-2007ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸಿದರು. ಮುಂದೆ IAS ತೇರ್ಗಡೆ ಆಗಿ ಹಾವೇರಿ, ಶಿರಸಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉಡುಪಿಯ ಜಿಲ್ಲಾಧಿಕಾರಿ. ಹೆಜಮಾಡಿ ಗಡಿಯಿಂದ ಶಿರೂರಿನವರೆಗೆ ಹರಡಿರುವ ಉಡುಪಿ ಜಿಲ್ಲೆಯು ವಿದ್ಯಾವಂತ ಹಾಗೂ ಬುದ್ದಿವಂತ ನಾಗರಿಕರ ಜಿಲ್ಲೆ ಎಂದೇ ಕರೆಸಿಕೊಂಡಿದೆ. ಅಂತಹ ಜಿಲ್ಲೆಗೆ ಕೊರೋನ ಮಹಾಮಾರಿ ಅಮರಿದಾಗ ಡಿಸಿ ಮೊದಲು ಎಚ್ಚೆತ್ತುಕೊಂಡು ಕೆಲಸಕ್ಕೆ ಇಳಿದಿದ್ದರು. ಸರಕಾರಿ ಯಂತ್ರವನ್ನು ಚುರುಕು ಮಾಡಿದರು. ವಿದೇಶದಿಂದ ಬಂದ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ನಿಗಾಕ್ಕೇ ಒಳಪಡಿಸಿದ್ದು, ಪ್ರತಿನಿತ್ಯ ನಾಲ್ಕು ಘಂಟೆ ಅಗತ್ಯವಸ್ತುಗಳ ಅಂಗಡಿ ತೆರೆದು ಜೀವನ ನಿರ್ವಹಣೆ ಸುಲಭ ಮಾಡಿದ್ದು, ಪಡಿತರ ವ್ಯವಸ್ಥೆಯನ್ನು ಸರಳ ಮಾಡಿದ್ದು, ಕಾಳದಂಧೆಗೆ ಕಡಿವಾಣ ಹಾಕಿದ್ದು, ಕ್ವಾರಂತೆನ್ ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಿದ್ದು, ಟಿ.ಎಮ್. ಎ. ಪೈ ಆಸ್ಪತ್ರೆಯನ್ನು KOVID 19 ಆಸ್ಪತ್ರೆಯಾಗಿ ರೂಪಿಸಿದ್ದು, ಯಾರಿಗೂ ಆಹಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು, ಉಡುಪಿ ಜಿಲ್ಲೆಯ ಗಡಿಗಳನ್ನು ಸೂಕ್ತ ಸಮಯದಲ್ಲಿ ಲಾಕ್ ಮಾಡಿದ್ದು, ರೈತರ ಬೆಳೆಗೆ ಬೆಂಬಲಬೆಲೆ ನೀಡಿ ಖರೀದಿಗೆ ವ್ಯವಸ್ಥೆ ಮಾಡಿದ್ದು, ಸ್ವಯಂಸೇವಾಸಂಸ್ಥೆ ಹಾಗೂ ಸ್ವಯಂಸೇವಕರನ್ನು ಯೋಗ್ಯವಾಗಿ ಬಳಸಿಕೊಂಡದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸವಲತ್ತು ಮತ್ತು ಕಿಟ್ ಒದಗಿಸಿದ್ದು….


.ಎಲ್ಲವೂ ಸರಿಯಾದ ನಿರ್ಧಾರಗಳು! ಜಿಲ್ಲೆಯ ಶಾಸಕರ ವಿಶ್ವಾಸ ಗೆಲ್ಲುವುದು, ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಜಿಲ್ಲೆಯ ಕೋಮು ಸೌಹಾರ್ದವನ್ನು ಕಾಪಾಡುವುದು, ನಿಯಮ ಉಲ್ಲಂಘಿಸುವ ಉಡಾಫೆ ಗಳನ್ನು ಶಿಕ್ಷಿಸುವುದು,…ಎಲ್ಲವೂ ಅವರಿಗೆ ಸಾಧ್ಯವಾಯಿತು.
ವಜ್ರಕ್ಕಿಂತ ಕಠೋರ, ಕುಸುಮಕ್ಕಿಂತ ಮೃದು ಅವರ ವ್ಯಕ್ತಿತ್ವ. ನೂರಾರು ಅಂತಃಕರಣದ, ಮನಕಲುಕುವ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ನೀಡುವುದು ಸುಲಭ. ಆದರೆ ಬಿಸಿಲಿಗೆ ಇಳಿದು ಕೆಲಸ ಮಾಡುವುದು ತುಂಬಾ ಕಷ್ಟ. ನಮ್ಮ ಡಿಸಿ ಆರಿಸಿದ್ದು ಎರಡನೆಯ ದಾರಿ! ಎಷ್ಟೇ ಒತ್ತಡದಲ್ಲಿದ್ದರು ಕೂಡ ಜನಸಾಮಾನ್ಯರ ಕರೆಗೆ ಓಗೊಟ್ಟು ಸ್ಪಂದಿಸುವುದು ಇನ್ನೂ ಅದ್ಭುತ! ಐರೋಡಿಯ ಮುದುಕರೊಬ್ಬರು ಹಸಿವೆಯಿಂದ ಕರೆ ಮಾಡಿದಾಗ ತಕ್ಷಣ ಪಿಡಿಒ ಮೂಲಕ 20ಕೆಜಿ ಅಕ್ಕಿ ತಲುಪಿಸಿದ್ದು, ಜಾರ್ಖಂಡ್ ರಾಜ್ಯದ ವಲಸೆಕಾರ್ಮಿಕರಿಗೆ ಶಾಸಕರ ಸೂಚನೆಗೆ ಸ್ಪಂದಿಸಿ ತಕ್ಷಣ ಪಡಿತರ ವಿತರಣೆ ಮಾಡಿದ್ದು, ಹಸಿದ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದು, ಭಟ್ಕಳದ ಸೋಂಕು ತಗುಲಿದ ಗರ್ಭಿಣಿಯನ್ನು ಉಡುಪಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು…ಹೀಗೆ ಅವರ ನೂರಾರು ಮಾನವೀಯ ಮುಖಗಳು ಅನಾವರಣವಾಗುತ್ತವೆ.
“ಇಡೀ ಜಿಲ್ಲೆಯ ಜನ ನನ್ನವರು” ಎಂದು ಭಾವಿಸಿ ತನ್ನ ಮನೆಯನ್ನು ಮರೆತು ದಿನಂಪ್ರತಿ 18 ಘಂಟೆ ಒಬ್ಬ ಜಿಲ್ಲಾಧಿಕಾರಿ ದುಡಿಯುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ. ಇದಕ್ಕೆ ಹೊರತಾಗಿ ಕೃಷಿಕರಾಗಿ ಅವರು ಮಾಡಿದ ಸಾಧನೆ, ತನ್ನ ಹುಟ್ಟೂರಲ್ಲಿ ಸ್ವಂತ ದುಡ್ಡಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಯುವಜನತೆಗೆ IAS/KAS ಉಚಿತ ತರಬೇತಿ ನೀಡುತ್ತಿರುವುದು, ತನ್ನ ಮನೆಯ ಸುತ್ತ ತರಕಾರಿ ತೋಟ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದು, ಹಕ್ಕಿಗಳಿಗೆ ಬೇಸಗೆಯಲ್ಲಿ ನೀರುಣಿಸುವ ಅಭಿಯಾನ ಮಾಡಿದ್ದು, ಉಡುಪಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಿದ್ದು….ಇವನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ! ಪ್ರಚಾರದಿಂದ ಅವರು ಎಂದಿಗೂ ವಿಮುಖ. ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯು ವಿವಿಧ 6 ವಿಭಾಗಗಳಲ್ಲಿ 6 ಬಾರಿ ಪ್ರಥಮ ಸ್ಧಾನ ಪಡೆದಿದೆ! ಜನಸಾಮಾನ್ಯರ ಡಿಸಿಗೆ ನಮ್ಮ ಸೆಲ್ಯೂಟ್.
-ರಾಜೇಂದ್ರ ಭಟ್ ಕೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






