ಸಿದ್ಧಾಪುರದ ಕ್ಯಾದಗಿಯ ಐನಕೈ ಬಹುಪ್ರಸಿದ್ಧ ಗ್ರಾಮ. ಈ ಗ್ರಾಮದ ಅನೇಕರು ಹೊರ ಊರು,ಪರ ರಾಜ್ಯಗಳಿಗೆಲ್ಲಾ ಹೋಗಿ ಶ್ರಮದಿಂದ ಹೆಸರು ಮಾಡಿದ್ದಾರೆ. ಇಂಥ ಐನಕೈನ ವೆಂಕಟರಾಮಯ್ಯ ಎನ್ನುವವರು ಸುಮಾರು ನೂರು ವರ್ಷದ ಕೆಳಗೆ ಆ ಭಾಗದ ಪ್ರಮುಖರು.
ಅವರು ತಮ್ಮ ಬುದ್ಧಿ-ಶ್ರಮ ಬಳಸಿ ಸ್ವಾತಂತ್ರ್ಯಾ ನಂತರ ಸಿದ್ಧಾಪುರ ಮತ್ತು ಕುಮಟಾಗಳನ್ನು ಸಂಪರ್ಕಿಸುವ ಬಿಳಗಿ ಸೇತುವೆ ನಿರ್ಮಾಣಕ್ಕೆ ಕಾರಣವಾದರು. ಈ ಸಮಾಜಮುಖಿ ವೆಂಕಟಸುಬ್ಬಯ್ಯನವರ ಮಗ ರಾಮಪ್ಪ ಹೆಗಡೆ,ಅವರೂ ಜಮೀನ್ಧಾರರಾಗಿ ಅಪ್ಪ. ಮನೆಯ ಹೆಸರು ಉಳಿಸುತ್ತಲೇ ಸಾಮಾಜಿಕ ಕಾರ್ಯಕರ್ತರಾಗಿ ದುಡಿದರು.
ಅವರಿಗೆ ಐದು ಜನ ಗಂಡು ಮಕ್ಕಳು ಇತಿಹಾಸಕಾರ ರಾಜರಾಮ ಹೆಗಡೆ, ಪತ್ರಕರ್ತ ರಂಗಕರ್ಮಿ ರಮಾನಂದ ಹೆಗಡೆ (ಐನಕೈ) ಸೇರಿದ ಅನೇಕ ಸಹೋದರರು, ಸಹೋದರಿಯರು, ಸೊಸೆಯಂದಿರು, ಮಕ್ಕಳ ಈ ತುಂಬುಕುಟುಂಬ ಸುಶಿಕ್ಷಿತ ಜನರ ಮನೆ. ಇವರ ಹಳೆಯ ಮನೆ ಭವಂತಿ ಮನೆಯಾಗಿದ್ದು ಮಲೆನಾಡಿನ ಸೋಗೆಮುಚ್ಚಿದ ಬೆಚ್ಚಗಿನ ಮನೆಯಾಗಿದ್ದನ್ನು ನಾವೆಲ್ಲಾ ಕಂಡವರು. ಆನಂತರ ಆರ್.ಆರ್.ಹೆಗಡೆ ಹೊಸಮನೆ ಕಟ್ಟತೊಡಗಿದಾಗ ಭವಂತಿಮನೆಯ ಕಾಲ ಮುಗಿಯಿತು ಎಂದುಕೊಂಡವರೇ ಹೆಚ್ಚು.
ಆದರೆ, ಈಗಿನ ಆಧುನಿಕ ತಂತ್ರಜ್ಞಾನದ ನೂತನ ಗೃಹ ಕೂಡಾ ಹಳೆಯ ಭವಂತಿ ಮನೆಯ ಬಹುತೇಕ ವಿಶೇಶಗಳನ್ನು ಮೇಳೈಸಿಕೊಂಡೇ ನಿರ್ಮಾಣವಾಗಿದೆ. ನಮ್ಮ ಎಂದಿನ ರೂಢಿಯಂತೆ ಐನಕೈ ಮನೆಗೆ ಹೋದಾಗ ಟಿ.ಎಸ್.ಎಸ್. ನಿಂದ ನಿವೃತ್ತರಾದಂತೆ, ಚಿಕ್ಕ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡವರಂತೆ ಓದಿನಲ್ಲಿ ಮುಳುಗಿದ್ದ ಆರ್.ಆರ್. ಹೆಗಡೆವರನ್ನು ಆಕಸ್ಮಿಕ, ಅನಿರೀಕ್ಷಿತ ಎನ್ನುವಂತೆ ಮಾತಿಗೆಳೆದವು. ಹಿರಿಯ ಗೆಳೆಯ ಸುರೇಂದ್ರ ದಫೇದಾರ್ ಚಿತ್ತೀಕರಿಸಿದ ಈ ವಿಡಿಯೋ ಐನಕೈ ಮತ್ತು ಅವರ ಮನೆಯನ್ನು ಪರಿಚಯಿಸಬಹುದೆನ್ನುವ ವಿಶ್ವಾಸದಿಂದ ಇಲ್ಲಿ ಜೋಡಿಸಿದ್ದೇವೆ. ಅಂದಹಾಗೆ… ಹಳೆ ನೆನಪು, ವೈಶಿಷ್ಟ್ಯ ಉಳಿಸಿಕೊಂಡ ಐನಕೈ ಭವಂತಿಮನೆಯ ಉಪಮೆಯೊಂದಿಗೆ ಈ ಕುಟುಂಬದ ಸಾಮಾಜಿಕ ಕೆಲಸ, ಕೊಡುಗೆ ಕೂಡಾ ಪುನರ್ ಮನನಕ್ಕೆ ಯೋಗ್ಯ. ಯಾಕೆಂದರೆ ಸರಿಸುಮಾರು ಒಂದು ಶತಮಾನದ ಹಿಂದಿನಿಂದ ಈ ಭಾಗಕ್ಕೆ ಸಂಪರ್ಕ ರಸ್ತೆ, ಸೇತುವೆ, ಆರೋಗ್ಯ ವ್ಯವಸ್ಥೆಗಳ ಹಿಂದಿನ ಕೈ ಈ ಐನಕೈ. ಈ ಕುಟುಂಬಕ್ಕೆ ಆಕಾಲದಲ್ಲಿ ಬಲಗೈ ಯಂತಿದ್ದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ.