


ಸಿದ್ಧಾಪುರ

‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ
ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ ಆಟದ ಮೈದಾನವಾದ ‘ರಾಜೀವ ಮೈದಾನ’ವನ್ನು ನಿವೇಶನ ಹಂಚಿಕೆಗೆ ಬಳಸದೆ, ಕ್ರೀಡಾ ಚಟುವಟಿಕೆಗಳಿಗಾಗಿಯೇ ಉಳಿಸಿಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಸಿದ್ಧಾಪುರ ತಹಶೀಲ್ದಾರರಿಗೆ ಹಾಗೂ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ವಿಸ್ತೃತ ಮನವಿ ಸಲ್ಲಿಸಲಾಗಿದೆ.


ಬೇಡ್ಕಣಿ ಗ್ರಾಮದ ಸರ್ವೆ ನಂಬರ್ 254 ‘ಅ’ ದಲ್ಲಿರುವ ಸುಮಾರು 3 ಎಕರೆ 36 ಗುಂಟೆ ವಿಸ್ತೀರ್ಣದ ಸರಕಾರಿ ಜಾಗವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯು ‘ರಾಜೀವ ಮೈದಾನ’ವೆಂದು ಅಧಿಕೃತವಾಗಿ ಠರಾವು ಅಂಗೀಕರಿಸಿ ನಾಮಕರಣ ಮಾಡಿರುತ್ತದೆ. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರತ್ಯೇಕವಾದ ಆಟದ ಮೈದಾನದ ಸೌಲಭ್ಯವಿಲ್ಲದ ಕಾರಣ, ಶಾಲಾ ಮಕ್ಕಳು ಹಾಗೂ ಸ್ಥಳೀಯ ಯುವಕರು ಕಳೆದ ಅನೇಕ ವರ್ಷಗಳಿಂದ ಶ್ರಮದಾನದ ಮೂಲಕ ಈ ಜಾಗವನ್ನು ಸಮತಟ್ಟುಗೊಳಿಸಿ, ನಿರಂತರವಾಗಿ ಕ್ರೀಡಾಂಗಣವನ್ನಾಗಿ ಬಳಸಿಕೊಂಡು ಪೋಷಿಸುತ್ತಿದ್ದಾರೆ.
ಆದರೆ, ಇತ್ತೀಚೆಗೆ ಈ ಜಾಗವನ್ನು ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಜಿ.ಪಿ.ಎಸ್ ಸಮೀಕ್ಷೆ ನಡೆಸಲಾಗುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನವನ್ನುಂಟುಮಾಡಿದೆ. ಗ್ರಾಮದ ನೂರಾರು ಶಾಲಾ ಮಕ್ಕಳಿಗೆ ಹಾಗೂ ಯುವಜನತೆಗೆ ಕ್ರೀಡೆ ಮತ್ತು ದೈಹಿಕ ಬೆಳವಣಿಗೆಗೆ ಇರುವ ಏಕೈಕ ಆಸರೆ ಇದಾಗಿದ್ದು, ಇದನ್ನು ನಿವೇಶನಗಳನ್ನಾಗಿ ಪರಿವರ್ತಿಸಿದರೆ ಮಕ್ಕಳ ಭವಿಷ್ಯಕ್ಕೆ ಕ್ರೀಡಾಂಗಣವೇ ಇಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ವಸತಿರಹಿತರಿಗೆ ನಿವೇಶನ ನೀಡುವುದಕ್ಕೆ ತಮ್ಮ ಯಾವುದೇ ವಿರೋಧವಿಲ್ಲ. ಬದಲಾಗಿ ಈ ಯೋಜನೆಯನ್ನು ಸ್ವಾಗತಿಸುತ್ತೇವೆ, ಆದರೆ ಅದಕ್ಕಾಗಿ ಪರ್ಯಾಯವಾಗಿ ಲಭ್ಯವಿರುವ ಸರಕಾರಿ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು, ಪ್ರಸ್ತುತ ನಡೆಯುತ್ತಿರುವ ಜಿ.ಪಿ.ಎಸ್. ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಮೈದಾನವನ್ನು ಉಳಿಸಿಕೊಡಬೇಕೆಂದು ತಹಶೀಲ್ದಾರರನ್ನು ಕೋರಿದ್ದಾರೆ.
ಇದೇ ವಿಷಯವಾಗಿ ಶಿರಸಿ ಉಪವಿಭಾಗಾಧಿಕಾರಿಗಳಿಗೂ ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿ ವಸ್ತುಸ್ಥಿತಿಯನ್ನು ವಿವರಿಸಲಾಯಿತು. ಗ್ರಾಮಸ್ಥರ ಅಹವಾಲಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ ಶಿರಸಿ ಉಪವಿಭಾಗಾಧಿಕಾರಿಗಳು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಆಟದ ಮೈದಾನಗಳ ತೀವ್ರ ಕೊರತೆ ಎದುರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಅಥವಾ ಯೋಜನೆಗಳಿಗೆ ಬಳಸಿಕೊಳ್ಳಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಈ ಮೈದಾನವನ್ನು ಕೇವಲ ಕ್ರೀಡಾ ಹಾಗೂ ಶಾಲಾ ಚಟುವಟಿಕೆಗಳಿಗಷ್ಟೇ ಮೀಸಲಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




