


Coffee ವಿತ್ ಜಿ.ಟಿ

ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..?
ಬಯನೇಮನೆ ತುಮರಿ ಸಮೀಪದ ಕಾಡಿನ ನಡುವಿನ ಊರು. ಶರಾವತಿ ಹಿನ್ನೀರನ ಈ ದುರ್ಗಮ ಊರಲ್ಲಿ ಮೃತ ಅಶೋಕನದು ಕೃಷಿ ಕುಟುಂಬ. ಕಾಡು ಸುತ್ತುವರಿದ ಅಶೋಕನ ಮನೆಗೆ ಹೋಗುವ ದಾರಿ ಕಡಿದಾಗಿದೆ. ಇಬ್ಬರು ಮಕ್ಕಳ ಪುಟ್ಟ ಸಂಸಾರ.


ಈಗ ಒಂದು ವರ್ಷದ ಕೆಳಗೆ ಅಶೋಕ ಒಂದು ದಿನ ಸಂಜೆ ಬ್ಯಾಕೋಡಿನ ಅರಣ್ಯ ಇಲಾಖೆ ಫಾರೆಸ್ಟ್ ಆಫೀಸ್ ಗೆ ಭೇಟಿ ನೀಡಿ ತನ್ನ ಮನೆಯ ಹಿಂಭಾಗದ ಕಾಡಿನಲ್ಲಿ ನಾಟ ಮಾಡಲು ಪ್ರಯತ್ನ ನಡೆಯುತ್ತಾ ಇದೆ, ಅದು ನನಗೆ ಹೊಂದಿಕೊಂಡ ಬೆಟ್ಟ ಆದ ಕಾರಣ ದಯಮಾಡಿ ಕ್ರಮ ತೆಗೆದುಕೊಳ್ಳಿ ಎಂದು ಮೌಖಿಕವಾಗಿ ಹೇಳಿ ಬಂದ.
ಪ್ರಮೋದ್ ಎನ್ನುವ ಫಾರೆಸ್ಟ್ ಆಫೀಸರ್ ಅವನ ಮೌಕಿಕ ದೂರು ಆಲಿಸಿ ಭರವಸೆ ನೀಡಿ ಕಳಿಸಿದ.

ಒಂದು ವಾರ ಕಳೆಯಿತು. ಅಶೋಕ್ ನಿರೀಕ್ಷೆ ಮಾಡಿದ್ದ ಘಟನೆ ನಡೆಯಿತು. ನಾಲ್ಕಾರು ದೊಡ್ಡ ಮರಗಳನ್ನು ಕಡಿದು ನಾಟ ಕೊಯ್ಯುವ ಪ್ರಕ್ರಿಯೆ ನಡೆಯುತ್ತಾ ಇತ್ತು.
ಅವತ್ತು ಬೆಳಗ್ಗೆ ತನ್ನ ಹೆಂಡತಿ ಮನೆಯ ಹಬ್ಬದ ಕಾರಣ ಅವರನ್ನು ತವರಿಗೆ ಬಿಡಲು ಅಶೋಕ್ ಪೇಟೆ ಎಂದು ಕರೆಯಬಹುದಾದ ಬ್ಯಾಕೋಡಿಗೆ ಬಂದು ಅಂಗಡಿಯಲ್ಲಿ ಅದು ಇದು ತೆಗೆದುಕೊಂಡು ಹೊರಡುವ ಹೊತ್ತಿಗೆ ಎದುರು ಫಾರೆಸ್ಟ್ ಪ್ರಮೋದ್ ಸಿಕ್ಕಿ ಬಿಟ್ಟ. ಕೊಂಚ ಸಿಟ್ಟಿನ ಭರದಲ್ಲಿಯೇ ” ಯಾಕೆ ಮರ ಕೊಯ್ಯಲು ಬಿಟ್ಟಿರಿ” ಎಂದು ಪ್ರಶ್ನೆ ಮಾಡಿದ್ದಾನೆ.
ನಂತರ ನಡೆದದ್ದು ಏನು ಗೊತ್ತಾ..?
ಬಯಲು ಸೀಮೆ ಮೂಲದ ಪ್ರಮೋದ್ ತಕ್ಷಣ ತನ್ನ ಉಳಿದ ಸಿಬ್ಬಂದಿ ಕರೆಸಿಕೊಳ್ಳುತ್ತಾನೆ. ಅಶೋಕ್ ನಾ ಮೇಲೆ ನಾಲ್ಕು ಜನ ಏಕಾಏಕಿ ಮುಗಿಬೀಳುತ್ತಾರೆ. ಯಾವ ಮಟ್ಟಿಗೆ ಅಂದರೆ ಸ್ವತಃ ಆತನ ಹೆಂಡತಿ ಗೋಳಾಟ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿ ತುಳಿಯುತ್ತಾರೆ. ಆತ ಎಷ್ಟೇ ಕೂಗಿಕೊಂಡರು ಬಿಡದ ಹಾಗೆ ಥಳಿಸುವ ಫಾರೆಸ್ಟ್ ಗ್ಯಾಂಗ್ ನಂತರ ಮಾಡಿದ್ದು ಏನು ಗೊತ್ತಾ 70 km ದೂರದ ಕಾರ್ಗಲ್ ರೇಂಜರ್ ಆಫೀಸ್ ಗೆ ಅನಾಮತ್ತಾಗಿ ಎತ್ತಿಹಾಕಿಕೊಂಡು ಹೋದರು. ಕಾರ್ಗಲ್ ರೇಂಜ್ ಆಫೀಸ್ ಇದ್ಯಲ್ಲ ಅಲ್ಲಿಗೆ ಕರೆದುಕೊಂಡು ಹೋದರು ಎಂದರೆ ಮುಗಿಯಿತು. ಅಲ್ಲಿ ಮಂಜನ ಕೇಸಿನಲ್ಲಿ ವಿವರಿಸಿದ ಪ್ರವೀಣ್ ರೀತಿಯ ಸ್ಪೆಸಿಲಿಸ್ಟ್ ಇರುತ್ತಾರೆ.
ಹಾಗೆ ಮಧ್ಯಾ ಹ್ನ ಹೆಂಡತಿಯ ತವರು ಮನೆಗೆ ಹೋಗಬೇಕಿದ್ದ ಅಶೋಕ ಅರಣ್ಯ ಗ್ಯಾಂಗ್ ಕೈ ಸಿಕ್ಕಿ ಕಾರ್ಗಲ್ ಟ್ರೀಟ್ಮೆಂಟ್ ನಲ್ಲಿ ಸಿಕ್ಕಿದ್ದ. ಸಂಜೆ ಆತನನ್ನು ಯಾವ ಕೇಸು ಹಾಕದೇ ಬಿಟ್ಟು ಕಳಿಸಲಾಯಿತು. ಆದರೆ ಆತನನ್ನು ಕರೆದುಕೊಂಡು ಹೋಗಲು ಬೈಕ್ ತೆಗೆದುಕೊಂಡು ಹೋಗಿದ್ದ ಯುವಕರು ಆತನು ನಡೆಯಲು ಆಗದ ಸ್ಥಿತಿಯಲ್ಲಿ ಕಾರು ತರಿಸಿಕೊಂಡು ಮನೆ ಸೇರಿಸಿದರು. ಆತನ ಕಾಲು ಗಂಟುಗಳ ಮೇಲೆ ಪ್ರಹಾರ ಮಾಡಲಾಗಿತ್ತು. ತೀವ್ರವಾದ ಗಂಟು ನೋವು. ಬ್ಯಾಕೂಡಿನ ಸಾರ್ವಜನಿಕ ಸ್ಥಳದಲ್ಲಿ ಹೆಂಡತಿ ಮತ್ತು ಸಾರ್ವಜನಿಕರ ಮುಂದೆ ರಸ್ತೆಯಲ್ಲಿ ಉರುಳಾಡಿಸಿ ಹೊಡೆದ ಅವಮಾನ. ಈ ಘಟನೆ ನಡೆದ ನಂತ್ರ ಅಶೋಕ ಮನೆ ಸೇರಿದ. ಘಟನೆ ಸುದ್ದಿ ಆಗದ ಕಾರಣ ಸತ್ತು ಹೋಯಿತು. ಮನೆ ಸೇರಿದ ಅಶೋಕ ಮಂಕಾದ.
ಸರಿಯಾಗಿ ಇಪ್ಪತ್ತು ದಿನ ಕಳೆಯಿತು.
ಅಶೋಕ್ ಮನೆಯ ಮುಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ….!!!
ಅಶೋಕನನ್ನು ಕೊಂದವರು ಯಾರು..?
ಮೊನ್ನೆ ತುಮರಿಯಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಘಟನೆ ನಂತರ ನಾವು ಮರಳಿ ಅರಣ್ಯ ಇಲಾಖೆ ವಿರುದ್ಧ ಧ್ವನಿ ಎತ್ತಿ ಕೇಸು ದಾಖಲು ಮಾಡಿದ ನಂತರ ಇಷ್ಟು ದಿನ ಮುಚ್ಚಿಟ್ಟಿದ್ದ ಈ ದುರಂತ ಕಥನ ಈಗ ಹೊರ ಬರುತ್ತಾ ಇದೆ.
ನನ್ನ ಪ್ರಶ್ನೆ ನಮ್ಮೂರಿನ ಜನರಿಗೇ. ಏನಾಗಿದೆ ನಿಮಗೆ..?
ಇಂತಹ ಘಟನೆಗಳನ್ನ ಯಾಕಯ್ಯ ಮುಚ್ಚಿಡುವಿರಿ..? ನೀವು ಇಂಥಹಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದೇ ಉಳಿದರೆ ಇವರು ಇನ್ನಷ್ಟು ಮಾನವಹತ್ಯೆಗಳನ್ನ ಮಾಡುತ್ತಾರೆ. ಈಗಾಗಲೇ ಅರಣ್ಯ ಇಲಾಖೆಯಿಂದ ಆಗಿರುವ ವಿವಿಧ ದೌರ್ಜನ್ಯ ಕಥೆ ಕೇಳಿದರೆ ಮೈ ನಡುಗುತ್ತದೆ. ಮೊನ್ನೆ ತುಮರಿ ಘಟನೆಯಲ್ಲಿ ಹಲ್ಲೆಗೊಳಾಗದ ಮಂಜುನಾಥ್ ಗೆ ನಿರಂತರ ಹಲ್ಲೆ ಮಾಡುವಾಗ ಅವರ ಬಾಯಿಂದ ಬಂದ ಮಾತು ಎಂಥವು ಗೊತ್ತಾ..?
” ಉರುಳುಗಲ್ಲು ಪಾದಯಾತ್ರೆ ಮಾಡಿದ ……… ಗಳು ನೀವೇಯಾ..?
ನೆಲದ ಜನರ ಮೇಲೆ ಅರಣ್ಯ ಗ್ಯಾಂಗ್ ಅದೆಂತಾ ಅಸಹನೆ ಬೆಳೆಸಿಕೊಂಡಿದೆ.
ಅಶೋಕ ತೀರಿ ಹೋದಾಗ ಮೊದಲು ಮನೆಗೆ ಭೇಟಿ ನೀಡಿದ್ದು ನಮ್ಮದೇ ಸ್ನೇಹಿತರ ತಂಡ. ಇಡೀ ರಾತ್ರಿ ನಾನು ಗ್ರಾಮಸ್ಥರ ಜತೆ ಇದ್ದೆ. ನಮ್ಮ ಜನ ಹೀಗಾಗಿತ್ತು ಅಂತ ಒಂದು ಮಾತು ಹೇಳಲಿಲ್ಲ. ಈಗ ಬಾಯಿ ಬಿಡುತ್ತಿದ್ದಾರೆ. ಆತನ ಕಾಲುಗಂಟಿಗೆ ಹೊಡೆದ ಹೊಡೆತ ಅಶೋಕ ಗೆ ಕಡಿದಾದ ಅವನ ಮನೆ ತೋಟದ ಹಾದಿಗೆ ಇಳಿಯಲು ಆಗದೆ ಇರುವಷ್ಟು ಪ್ರಖರ ಆಗಿತ್ತು. ನರಳಿ ನರಳಿ ಬಲಿಯಾಗಿಬಿಟ್ಟ.
ನಾಗರಿಕ ಒಬ್ಬ ಅರಣ್ಯ ಇಲಾಖೆಗೆ ಪ್ರಶ್ನೆ ಕೇಳಿದ್ದಕ್ಕೆ ಮರಳಿ ಪಡೆದ ಬಳುವಳಿ ಇದು…!!
(*ಜಿ ಟಿ ತುಮರಿ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






