


ಚೌತಿ ಅಂದರೆ ಗೌರಿ-ಗಣೇಶ ಚತುರ್ಥಿ ಸ್ಮರಿಸಿಕೊಳ್ಳಲು ಚೌತಿ ಹಬ್ಬವೇ ಬರಬೇಕೆಂದೇನಿಲ್ಲ, ಎಲ್ಲಿಯಾದರೂ ಗಜಮುಖನೆ ಗಣಪತಿಯೆ ನಿನಗೆ ಒಂದನೆ…

ಎಂಬ ಹಾಡು ಕೇಳಿ ಬಂದರೆ ಮಳೆಯಿಂದ ಮುದ್ದೆಯಾದ ನಮ್ಮ ಮನಸ್ಸು ನಮ್ಮ ಗೌರಮ್ಮನ ಹಬ್ಬವನ್ನು ಫ್ಲಾಶ್ ಬ್ಯಾಕ್ ನಲ್ಲಿ ತೋರಿಸಿದಂತೆನಿಸುತ್ತದೆ.

ನಮ್ಮೂರ ಗೌರಮ್ಮನ ಹಬ್ಬ ಎಂದರೆ ಗ್ರಾಮದ ಸಾರ್ವಜನಿಕ ಗಣಪತಿ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿಷ್ಠಾಪಿಸುವ ಗೌರಮ್ಮ ಜೊತೆಗೆ ಹೊಸ ಬಟ್ಟೆಗಳು, ಪಟಾಕಿ ವಾಸನೆ, ಪಳಯುಳಿಕೆ, ಅತ್ತೆ- ಅವರ ಮಕ್ಕಳು ಬಗೆಬಗೆಯ ತಿನಿಸುಗಳು ಜೊತೆಗೆ ಪುರಾಣ, ಇತಿಹಾಸ,ಭಜನೆ,ಇಲಾಡಿ ಧಾರ್ಮಿಕತೆ ಇತ್ಯಾದಿ….


ನಮ್ಮೂರೆಂದರೆ.. ಆರು ನೂರು ಮನೆಗಳನ್ನು ದಾಟಿ ಈಗ ಸಾವಿರ ಸಂಖ್ಯೆಗೇರಿರುವ ಮನೆಗಳ ದೊಡ್ಡ ಗುಚ್ಛ. ಸಾರ್ವಜನಿಕ ಸಾರಿಗೆ ಬರುವ ಮುಖ್ಯ ರಸ್ತೆಯ ಅಕ್ಕಪಕ್ಕ ಈಶ್ವರನ ಗುಡಿ, ದೇವರ ಕೆರೆ, ಮುಂದೆ ಅರಳಿ ಕಟ್ಟೆ, ಮಾರಮ್ಮನ ಗುಡಿ, ಮಾಸ್ತಿ ಕಟ್ಟೆ, ವೀರಭದ್ರ ದೇವಸ್ಥಾನ, ಸಿಡಿಬ್ಯಾಣದ ಕಂಡಿ, ಕುಮಾರ ರಾಮ ಗಾಮನಾದ ರಾಮನ ಗ್ರಾಮ ದೇವರು, ಹೀಗೆ ಸಹಸ್ರಾರು ಮನೆಗಳಿಗೆ ನಾಲ್ಕು ಕೆರೆಗಳಿದ್ದರೂ ದೇವರ ಕಟ್ಟೆ ದೇವಾಲಯಗಳ ಸಂಖ್ಯೆ ಒಂದು ಡಜನ್ ಮೀರುತ್ತದೆ.

ಇಂಥ ಗ್ರಾಮೀಣ ಕ್ಯಾನ್ ವಾಸ್ ನಂಥ ನಮ್ಮೂರಲ್ಲಿ ಧ್ವಾರ ಬಾಗಿಲಿಗೇ ಇರುವ ಮೊದಲ ಸ್ಟಾಪ್ ಬಸ್ ನಿಲ್ಧಾಣದ ಎದುರಿನ ಕೆರೆಯ ಮೇಲೆ ಈಶ್ವರ ದೇವಾಲಯ ಇರುವುದನ್ನು ಬಿಟ್ಟರೆ ಈ ಕೆರೆಗೆ ದೇವರ ಕೆರೆ ಎಂದು ಕರೆಯಲು ಸಕಾರಣಗಳೇನೂ ಇದ್ದಂತಿಲ್ಲ. ಆದರೆ, ಈಶ್ವರನನ್ನು ಪೂಜಿಸುವ ಮುರುಗೇ ಗೌಡರ ಕುಟುಂಬ ಈಶ್ವರನ ಅಭಿಷೇಕಕ್ಕೆ ಈ ಕೆರೆಯ ನೀರು ಬಳಸಿರಬಹುದಾದ ಗುಮಾನಿ ಮೇಲೆ ಈ ಕೆರೆಗೆ ದೇವರಕೆರೆ ಎನ್ನುವ ಅನ್ವರ್ಥಕ ನಾಮ ಬಂದಿರಬಹುದೆಂಬುದೇ ನಮ್ಮ ಅಂದಾಜು!
ಕೋಲಶಿರ್ಸಿಯ ಹಾಲ್ ಕೆರೆ, ಹೊಟ್ ಕೆರೆ ಹೊಸಕೆರೆ, ಹಾಲ್ ಹೊಂಡ ಹೀಗೆಲ್ಲಾ ಸಣ್ಣ ಪುಟ್ಟ ಕೆರೆಗಳು ಇದ್ದರೂ ಊರ ಮುಂದಿನ ದೇವರ ಕೆರೆಯಲ್ಲಿ ಜನ ತಮ್ಮ ದನ ಎತ್ತುಗಳ ಮೈತೊಳೆಯಬೇಕು.ತಿಥಿ ಕರ್ಮಗಳ ಎಡೆಎಲೆ ತೇಲಿಸಬೇಕು. ಇತ್ತೀಚೆಗಿನ ಶೌಚಮುಕ್ತ ಗ್ರಾಮದ ಪರಿಕಲ್ಪನೆ ಮೊದಲು ಜನ ಇಲ್ಲಿ ಅದನ್ನು ಅದ್ದಿಕೊಂಡು ಶುಭ್ರವಾದದ್ದೇ ಹೆಚ್ಚು!

ಇಂಥ ದೇವರ ಕೆರೆಗೆ ನೂರಾರು ಗೌರಮ್ಮನ ಮೆರವಣಿಗೆ ಬಂದು ಎಲ್ಲರ ಮನೆಯ ಕರ್ಪೂರಗಳು ವಿಳ್ಯದೆಲೆಮೇಲೆ ಕೂತು ಕೆರೆಗೆ ದೀಪಾಲಂಕಾರ ಮಾಡಿ, ಊರ ಭಾವಿಗಳ ನೀರೆಲ್ಲಾ ಗೌರಿಯ ರೂಪದಲ್ಲಿ ಇಲ್ಲಿ ಸೇರಿ ಈ ಪವಿತ್ರ ಕೆರೆಯ ನೀರು ಗಂಗಮ್ಮನಾಗಿ ಪ್ರತಿಮನೆಯ ಗೌರಿ ಮಂಟಪ ಏರುವ ಮಧ್ಯೆ ಇಲ್ಲಿ ಹಲವು ಆಚರಣೆಗಳಿವೆ.
ಪಟಾಕಿ ಸದ್ದಿನೊಂದಿಗೆ ಹೊಸ ಸೀರೆಯುಟ್ಟ ಮನೆಮಕ್ಕಳನ್ನು ತಪ್ಪದೆ ಪ್ರತಿವರ್ಷ ಕರೆಸಿಕೊಳ್ಳುವ ದೇವರಕೆರೆ ತನ್ನ ನೀರು ಮುಟ್ಟಿದ ಬೆನಕನ ಬುತ್ತಿಯನ್ನು ಕೆರೆದಂಡೆ ಮೇಲೆ ಪ್ರತ್ಯೇಕವಾಗಿ ಇರಿಸಿಕೊಂಡು ಶಿವನಿಗೆ ಅರ್ಪಿಸುವಲ್ಲಿ ಒಂದು ದಂತೆ ಕತೆ ಅಡಗಿದೆ.
ಶಿವ ಪುರಾಣದಲ್ಲಿ ಬರುವ ಕಥೆಯಲ್ಲಿ ಪರ್ವತರಾಜನ ಮಗಳು ಪಾರ್ವತಿ ಯಾನೆ ಗೌರಿ, ಅಪ್ಪ,ರಾಜ ಗಿರಿರಾಜನ ಮನಸ್ಶಿಛ್ಚೆಗೆ ವಿರುದ್ಧವಾಗಿ ಶಿವನನ್ನು ಒಲಿಸಿದ್ದಳಂತೆ! ಸ್ಮಶಾನ ವಾಸಿ ಬೂದಿಬಡುಕ ಶಿವ ತನ್ನ ಅಳಿಯನಾಗುವುದೆಂದರೆ… ಎಂದು ಕುಪಿತನಾದ ಗಿರಿರಾಜ ಮಗಳನ್ನು ಕನ್ಯಾದಾನ ಮಾಡಲು ಒಪ್ಪದಿದ್ದಾಗ ಆಕೆ ಉಪಾಯದಿಂದ ಪಲಾಯನ ಮಾಡಿ ಶಿವನನ್ನು ಸೇರಿಕೊಂಡಳಂತೆ!
ಪ್ರತಿಷ್ಠೆಯಿಂದ ಕುಂದಿದ ರಾಜನಿಗೆ ಕಾಲಾಂತರದಲ್ಲಿ ಮಗಳಮೇಲಿನ ಪ್ರೀತಿ ನೋವು- ಮೋಹವಾಗಿ ಉಕ್ಕಿ ಹಿರಿಯರ ಸಂಧಾನ ಪಂಚಾಯತಿಯಂತೆ ವರ್ಷಕ್ಕೊಮ್ಮೆಯಾದರೂ ಮಗಳನ್ನು ಮನೆಗೆ ಕರೆಸಿಕೊಳ್ಳಲು ಅನುಮತಿ ದೊರೆಯಿತಂತೆ. ಈ ಕರಾರಿನ ಮೇರೆಗೆ ಊರಿಗೆ- ನೀರಿಗೆ ಬರುವ ಗೌರಿ, ನಮ್ಮ ಗೌರಮ್ಮ. ಈ ಗೌರಮ್ಮನಿಗೆ ಬಣ್ಣದ ಪರಪರೆಗಳ ದೀಪಾಲಂಕೃತ ಮಂಟಪವೇ ಬೇಕೆಂದೇನೂ ಇಲ್ಲ. ಪರಿಸರ ಪೂರಕವಾಗಿ ಬಾಳೆ ಮರ,ದಿಂಡು,ಬಣ್ಣದ ಗಿಡ, ಮರದ ಮಣೆ,ಬಾಳೆದಿಂಡಿನ ಕಾಲಿನ ಮೇಲೆ ಎಣ್ಣೆ ದೀಪಗಳಿದ್ದರೂ ನಮ್ಮ ಗೌರಮ್ಮ ತೌರಿನ ಆತಿಥ್ಯವನ್ನು ಸಮನ ಮಾಡದೆ ಸ್ವೀಕರಿಸುತ್ತಾಳೆ.
ರಾಜನ ಪ್ರತಿಷ್ಠೆ, ದರ್ಪದಂತೆ ಮಗಳು ಮನೆಯ ವರೆಗೆ ಬರಬಹುದು ಆದರೆ ಜಾತಿಯಿಂದ ಹೊರಗಿನವನಾದ ಸ್ಮಶಾನವಾಸಿ ಶಿವ ಕೆರೆ ಏರಿ ಮೇಲೆ ಇಡುವ ಎಡೆಯೂಟದ ಬುತ್ತಿ ಉಂಡು ಮಾವನ ಸತ್ಕಾರ ಸ್ವೀಕರಿಸುವುದನ್ನು ಮೀರಿ ಊರೊಳಗೆ ಬರುವಂತಿಲ್ಲ. . ಆದರೆ ಈ ಬೆನವನ ಎಡೆಯನ್ನು ಅಕ್ಕಪಕ್ಕದ ಪರಿಶಿಷ್ಟರು ಕೊಂಡೊಯ್ಯುವ ಆಚರಣೆ ಹಿಂದೆ ಅಲ್ಲಿ ಜಾತಿ ಭೇದದ ವಾಸನೆಯೂ ಬಡಿಯುತ್ತದೆ.
ಹೀಗೆ ಆಚರಣೆ, ದೇವರ ಕಾರಣಕ್ಕೆ, ಮದುವೆಯ ಓಲಗ ಊದಲು ಮತ್ತು ಕೂಲಿಗೆ ಮಾತ್ರ ಬರುವ ಪರಿಶಿಷ್ಟರು ಊರ ವ್ಯಾಪ್ತಿಯಲ್ಲೆಲ್ಲೂ ಇಲ್ಲ.!

ಊರಿನ ಅಗತ್ಯ, ಸಂಪ್ರದಾಯಕ್ಕೆ ಬೇಕಾಗಬಹುದಾದ ಸಾಬರು, ಹೊಲೆಯರು ಇಲ್ಲಿ ಬದುಕುವುದೇ ಇಲ್ಲ ಎನ್ನುವ ನಮ್ಮೂರ ಜನರ ಅಪನಂಬಿಕೆ ಈ ಗ್ರಾಮದಲ್ಲಿ ಅನ್ಯರನ್ನು ಒಳಸೇರಿಸದಿರುವುದಕ್ಕೂ ಅನೇಕ ಕಥೆಗಳಿವೆಯಂತೆ!
ವಾರ್ಷಿಕ ಗಣೇಶ ಹಬ್ಬದ ಬೆನವನ ಪೂಜೆ ಸೇರಿ ಕೆಲವೇ ಪೂಜೆ ಮಾಡುವ ಗಣಪತಿ ಹೆಗಡೆ ಕುಟುಂಬ ಗ್ರಾಮದ ಏಕೈಕ ವೈದಿಕ ಕುಟುಂಬ. ಗ್ರಾಮದೇವಿ ಮಾರಿಕಾಂಬೆಯ ಪೂಜೆಗಾಗಿ ಬಂದು ನೆಲೆಸಿದ ಬಡಿಗರ ಕುಟುಂಬ ಮಾರಿ ಪೂಜೆ ಮಾಡುತ್ತಾ ಊರಿನ ಕೃಷಿ ಸಲಕರಣೆಗಳ ತಯಾರಿಸುವ ಕುಲುಮೆ ಮನೆಯಾಗಿ ಪ್ರಸಿದ್ಧ. ಈ ಅಲ್ಪಸಂಖ್ಯಾತ ಕುಟುಂಬಗಳಿಗೆ ದೇವರ ಪೂಜೆಯ ಜವಾಬ್ಧಾರಿ ಹೊರಿಸಿದರೆ ಆ ಮೂಲಕ ಅವರಿಗೆ ಏಕಜಾತಿಯ ಕಡಕ್ ಬಹುಸಂಖ್ಯಾತರಿಂದ ಗೌರವ, ರಕ್ಷಣೆ ಸಿಗಬಹುದೆನ್ನುವ ಸಾಮಾಜಿಕ ಭದ್ರತೆಯ ಅಂಶವೂ ಸೇರಿದೆ.
ಗ್ರಾಮದ ನಾಲ್ಕೈದು ಜಮೀನ್ಧಾರ ಲಿಂಗಾಯತ ಕುಟುಂಬಗಳು ಈಗ ಒಂದು ಡಜನ್ ಮೀರಿ ಗೌಡರ ಕೇರಿ ನಿರ್ಮಿಸಿವೆ. ಈ ಕೇರಿಗೆ ತಾಕಿಕೊಂಡಿರುವ ಶೆಟ್ಟರ ಕೇರಿ ಕೂಡಾ ನಾಲ್ಕೇ ಮನೆಗಳಿಂದ ಶುರುವಾದದ್ದು. ಇವರು ಕರಾವಳಿಯಿಂದ ವ್ಯಾಪಾರ ಮತ್ತು ಮಾರಿಕಾಂಬೆಯ ಮೂರ್ತಿ ಕೆತ್ತನೆ ಮಾಡುತ್ತಾ ಮರದ ಮಾಲಕಿ ಕೆಲಸಕ್ಕೆ ಬಂದವರು. ಅಕೆಶಿಯಾ ಕಾಡಿನಂಥ ಏಕಜಾತಿ ಪಾರಮ್ಯದ ನಮ್ಮೂರಿಗೆ ಘಟ್ಟದ ಕೆಳಗಿನ ನಾಯ್ಕರೂ ಕೂಲಿ, ವ್ಯಾಪಾರಕ್ಕಾಗಿ ಬಂದು ಮುಖ್ಯ ರಸ್ತೆಯ ಅಕ್ಕಪಕ್ಕ ನೂರಾರು ಮನೆ ಮಾಡಿಕೊಂಡು ನೂರಾರು ವರ್ಷಗಳಿಂದ ಈ ಊರವರೇ ಆಗಿ ಹೋಗಿದ್ದಾರೆ.
ಸಿದ್ಧಾಪುರ ತಾಲೂಕಿನಿಂದ ಮಲಬಾರಿಗಳನ್ನು ಓಡಿಸುವ ಚಳವಳಿ!, ಪೇಟೆಯ ಕೊಂಕಣಿಗರ ಗಲಾಟೆ ಸೇರಿದ ತಾಲೂಕಿನ ಪ್ರಮುಖ ಬಂಡಾಯಗಳಲ್ಲಿ ನಮ್ಮ ಊರಿನ ಪಾಲಿದೆಯಾದರೂ ಅವರ್ಯಾರೂ ನಮ್ಮೂರಲ್ಲಿರಲಿಲ್ಲ ಎನ್ನುವ ಅಂಶವೂ ವಿಚಿತ್ರವೇ. ಸ್ವಾತಂತ್ರ್ಯ ಹೋರಾಟ, ಕಾಗೋಡು ಹೋರಾಟ ಮಾಡಿದ ಅನೇಕರಿದ್ದರೂ ಯಾರಿಗೂ ಪಿಂಚಣಿ ಭಾಗ್ಯ ದೊರೆಯಲಿಲ್ಲ ಯಾಕೆಂದರೆ, ಈ ಹೋರಾಟಗಾರರೆಲ್ಲಾ ಒಡೆಯರು ʼಪೊಲೀಸರ್ರು ಬರ್ತರೆ ಕಾಡ ಸೇರ್ರೋʼ ಎಂದರೆ ಇವರೆಲ್ಲಾ ಗೇಣಿ ಕೆಲಸ ಬಿಟ್ಟು ಕಾಡು ಸೇರಿ ವಾರಗಟ್ಟಲೆ ಅಲ್ಲೇ ಠಕಾಣಿಹೂಡಿ ಭೇಟೆಯಾಡಿ ಆರಾಂ ವನವಾಸ ಅನುಭವಿಸಿ ಸುಖಿಸುತಿದ್ದರು!.
ಹೀಗಿರುವ ನಮ್ಮೂರಲ್ಲಿ ದೀಪಾವಳಿಯ ಸಾಮೂಹಿಕ ದನ ಬೆಚ್ಚಲು ಈಗ ದನಗಳೇ ಇಲ್ಲ, ಹಿಂದಿನ ನಾಲ್ಖೈದುನೂರು ಎತ್ತಿನ ಜೋಡಿಯ ಬಾಸಿಂಗದೆತ್ತಿನ ವೈಭವದ ಮೆರವಣಿಗೆಗೆ ಈಗ ನಾಲ್ಕೈದು ಎತ್ತಿನ ಜೋಡಿಯೂ ಸಿಗುತ್ತಿಲ್ಲ. ಎರಡ್ಮೂರುದಿವಸ ನಡೆಯುತಿದ್ದ ಎತ್ತಿನೋಟ ಈಗ ಅರ್ಧದಿನಕ್ಕೆ ಇಳಿದಿದೆ. ಆರಿದ್ರಮಳೆ ಹಬ್ಬದಲ್ಲಿ ದೇವರನ್ನು ಎಬ್ಬಿಸಲು ಊರೇ ನೆರೆಯುತಿದ್ದ ಬಿಂಗಿಗೆ ಈಗ ಯುವಕರ ಕೊರತೆ. ಎಳೆಯರ ಬೆಂಗಳೂರು ವಲಸೆ ನಡುವೆಯೂ ಜಾತ್ರೆಯೂಟ, ಆರಿದ್ರಮಳೆಯ ಬಾಡೂಟದ ವೈಭವ ಹೊರತುಪಡಿಸಿ ನಮ್ಮೂರು ಈಗ ಜಾಗತಿಕ ಹಳ್ಳಿ. ಎಲ್ಲರ ಕೈಯಲ್ಲಿ ಮೊಬೈಲು ಬೆರಳತುದಿಯಲ್ಲಿ ಜಗತ್ತು ಗರಗರ ತಿರುಗುತ್ತದೆ. ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ, ಹುಡುಗಿಯರಿಗೆ ಉತ್ತಮ ವರ!. ಶಿರಸಿಯಲ್ಲಿ ಜಾತ್ರೆಯಲ್ಲಿ ವರ, ವಧು ವೀಕ್ಷಣೆಯಾದಂತೆ ನಮ್ಮೂರಲ್ಲಿ ಸ್ವಯಂವರದ ಅವಕಾಶವಿಲ್ಲ. ಹೆಸರಿಗೆ ಕೋಲಶಿರ್ಸಿ ಜಾತ್ರೆಯೂ ೭ರಿಂದ ೯ ವರ್ಷಗಳಿಗೊಮ್ಮ! ಯಾರಿಗ್ಹೇಳೋಣ ನಮ್ ಪ್ರಾಬ್ಲೆಮ್ಮು?
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






