


ಕೋಲ್ ಸಿರ್ಸಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಗುತ್ತಿ ಮಂಜಪ್ಪ ಎಂ.ಜಿ. ಆಗಸ್ಟ್ 31 ಕ್ಕೆ ಸೇವಾನಿವೃತ್ತಿ


ಚಂದ್ರಗುತ್ತಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿ, ನಿರಂತರ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಾ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋಲ್ ಸಿರ್ಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕ ಹಾಗೂ ಎನ್.ಎಸ್.ಎಸ್. ಅಧಿಕಾರಿ ಚಂದ್ರಗುತ್ತಿ ಮಂಜಪ್ಪ ಎಂ.ಜಿ. ಅವರು ಇದೇ ಆಗಸ್ಟ್ 31, 2026 ರಂದು ಸುದೀರ್ಘ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಕೃಷಿ ಆಧಾರಿತ ಬಡ ಗೇಣಿದಾರರ ಕುಟುಂಬದಲ್ಲಿ 1966 ಆಗಸ್ಟ್ 4 ರಂದು ತಂದೆ ಮರಡಿ ಗಣಪಣ್ಣ ಹಾಗೂ ತಾಯಿ ಮರಡಿ ನಾಗಮ್ಮ ದಂಪತಿಯ ಪುತ್ರನಾಗಿ ಜನಿಸಿದ ಮಂಜಪ್ಪ ಎಂ.ಜಿ. ಅವರು, ದೊಡ್ಡ ಕುಟುಂಬದಲ್ಲಿ ಬೆಳೆದವರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮ ಚಂದ್ರಗುತ್ತಿಯಲ್ಲೇ ಪೂರೈಸಿ, ನಂತರ ಸೊರಬದ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಮುಂದುವರಿದು ಸೊರಬ ಕಾಲೇಜುಗಳಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾರೆ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪೂರೈಸಿದ್ದಾರೆ.


ಚಂದ್ರಗುತ್ತಿ ಗ್ರಾಮದಲ್ಲಿ ಅಪಾರ ಸ್ನೇಹಿತರ ಬಳಗ ಮತ್ತು ಹಿತೈಷಿಗಳ ಮಾರ್ಗದರ್ಶನದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಪದವಿಯನ್ನು ಪಡೆದಿದ್ದಾರೆ. ಸ್ನೇಹ ಜೀವಿಯಾಗಿ ಸರಳ ಸಜ್ಜನ ಮತ್ತು ಶಿಸ್ತಿನ ಸಿಪಾಯಿಯಾಗಿ ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರವಾಗಿದೆ.
ವೃತ್ತಿ ಪಥ:
1993-94 ರಲ್ಲಿ ಆನವಟ್ಟಿ ಹಾಗೂ ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ ಇವರು, 2005 ಜೂನ್ 10 ರಂದು ಖಾಯಂ ಉಪನ್ಯಾಸಕರಾಗಿ ಉಡುಪಿ ಜಿಲ್ಲೆಯ ಶಿರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಿಯೋಜನೆಗೊಂಡರು. ಬಳಿಕ 2012 ಜೂನ್ 13 ರಂದು ಸಿದ್ದಾಪುರ ತಾಲೂಕಿನ ಕೋಲ್ ಸಿರ್ಸಿ ಕಾಲೇಜಿಗೆ ವರ್ಗಾವಣೆಯಾಗಿ, ಕಳೆದ 15 ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಶೈಕ್ಷಣಿಕ ಸಾಧನೆ ಹಾಗೂ ಪರಿಸರ ಜಾಗೃತಿ:
ಅರ್ಥಶಾಸ್ತ್ರ ವಿಷಯದಲ್ಲಿ ಪ್ರತಿವರ್ಷ ಸರಾಸರಿ ಶೇಕಡಾ 95ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ಇವರು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದನ್ನೇ ತಮ್ಮ ಮುಖ್ಯ ಗುರಿಯಾಗಿಸಿಕೊಂಡಿದ್ದರು.
ಎನ್.ಎಸ್.ಎಸ್. ಅಧಿಕಾರಿಯಾಗಿ ಗ್ರಾಮೀಣ ಭಾಗದಲ್ಲಿ 6 ಯಶಸ್ವಿ ಶಿಬಿರಗಳನ್ನು ಆಯೋಜಿಸಿ, ಜಾನಪದ ಕಲೆ, ನಾಟಕ ಹಾಗೂ ಬಯಲಾಟ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ತರಬೇತಿ ನೀಡಿದ್ದಾರೆ. ಕಾಲೇಜಿನಲ್ಲಿ ಕ್ರೀಡಾ ಸಂಯೋಜಕರಾಗಿ ಕಬಡ್ಡಿ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಎರಡು ಬಾರಿ ಕರೆದೊಯ್ದು ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ. 2017-18 ರಲ್ಲಿ ಇವರು ಸಂಘಟಿಸಿದ ರಾಜ್ಯಮಟ್ಟದ ಕ್ರೀಡಾಕೂಟವು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
4 ವರ್ಷಗಳ ಕಾಲ ಪ್ರಭಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕಾಲೇಜಿನಲ್ಲಿ ಸ್ಥಳೀಯ ಆಡಳಿತದ ಸಹಾಯದಿಂದ ಕ್ರೀಡಾಂಗಣ, ಕುಡಿಯುವ ನೀರಿನ ಘಟಕ ಹಾಗೂ ಕಿರು ಉದ್ಯಾನವನ ನಿರ್ಮಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಸಿದ್ದಾಪುರ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಮತ್ತು ಸರ್ಕಾರಿ ನೌಕರರ ಸಂಘದ ಕಾಲೇಜು ಪ್ರತಿನಿಧಿಯಾಗಿ ಹಾಗೂ ಕಾರವಾರ ಜಿಲ್ಲಾ ಕೋಶಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದರ ಮೂಲಕ ಉಪನ್ಯಾಸಕರ ವಿವಿಧ ಸಮಸ್ಯೆಗಳಿಗೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ.ಸಹೋದ್ಯೋಗಿಗಳು ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಪ್ರಗತಿಪರ ಚಿಂತನೆ ಹಾಗೂ ಸಮಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಸಾಕ್ಷರತೆ ವೈಚಾರಿಕ ಮತ್ತು ವೈಜ್ಗಾನಿಕ ಚಿಂತನೆಗಳೆಡೆಗೆ ಯುವಶಕ್ತಿಗೆ ಮಾರ್ಗದರ್ಶನ ನೀಡುವ ಮೂಲಕ ಮೌಢ್ಯಗಳ ನಿರ್ಮೂಲನೆ ಯುವಕರನ್ನು ದುಶ್ಚಟಗಳಿಂದ ದೂರವಾಗಿಸುವ ಪ್ರಯತ್ನ, ಯುವಶಕ್ತಿಯೆ ದೇಶದ ಶಕ್ತಿ ಯಾಗಿಸಿ. ದೇಶದ ಅಭಿವ್ರದ್ಧಿ ಬಳಕೆಯೆ ಇವರ ಆಶಯವಾಗಿದೆ.
“ಮಂಜಪ್ಪ ಎಂ.ಜಿ. ಅವರು ಕೇವಲ ಅರ್ಥಶಾಸ್ತ್ರವನ್ನು ಬೋಧಿಸುವ ಶಿಕ್ಷಕರಷ್ಟೇ ಅಲ್ಲ; ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ, ಶಿಸ್ತು, ಕ್ರೀಡಾಸಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತಿದ ನೈಜ ಮಾರ್ಗದರ್ಶಿ. ಕೋಲ್ ಸಿರ್ಸಿ ಕಾಲೇಜಿನ ಶೈಕ್ಷಣಿಕ ಏಳಿಗೆ ಹಾಗೂ ಎನ್.ಎಸ್.ಎಸ್. ಶಿಬಿರಗಳ ಮೂಲಕ ಗ್ರಾಮಗಳ ವಿಕಾಸಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ನಿವೃತ್ತ ಜೀವನವು ಸುಖ, ಶಾಂತಿ ಮತ್ತು ಸುಕ್ಷೇಮದಿಂದ ಕೂಡಿರಲಿ ಎಂದು ಹಾರೈಸುತ್ತೇನೆ.”
— ಎನ್. ಜಿ. ನಾಗರಾಜ್, ತಾಲೂಕು ಪಂಚಾಯಿತಿ ಸದಸ್ಯರು ಚಂದ್ರಗುತ್ತಿ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




