ಸಹಕಾರಿ ಸೇರಿದಂತೆ…. ನಾನಾ ಕ್ಷೇತ್ರಗಳ ಕೀಲಿಕೈ ಕಳ್ಳನ ಕೈ ಸೇರಿದರೆ ಅಪಾಯ!!!

ಕನ್ನ ಹಾಕಿದವರಿಗಿಂತ ಕಾವಲು ನಿಂತು ಕಣ್ಣುಮುಚ್ಚಿದವನೇ ಪ್ರಧಾನ ಆರೋಪಿ!?
(ಸಹಕಾರಿ ರಂಗದ ರಕ್ಷಾ ಕವಚವಾದ ಸನ್ನದು ಲೆಕ್ಕಪರಿಶೋಧಕರ ನೈತಿಕ ಅಧಃಪತನದ ಕರಾಳ ದರ್ಶನ)

“ಭಾರತೀಯ ಸಂಸ್ಕೃತಿಯಲ್ಲಿ ವೈದ್ಯನನ್ನು ‘ವೈದ್ಯೋ ನಾರಾಯಣೋ ಹರಿಃ’ ಎಂದು ಸಾಕ್ಷಾತ್ ಭಗವಂತನ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ತಪ್ಪು ಹಾದಿ ತುಳಿದು, ದುಶ್ಚಟಗಳಿಗೆ ದಾಸನಾಗಿ ಕಾಯಿಲೆಗೆ ತುತ್ತಾದರೂ, ಆ ಕ್ಷಣದಲ್ಲಿ ಅವನ ಗತಕಾಲವನ್ನು ಲೆಕ್ಕಿಸದೆ ಪ್ರಾಣ ಉಳಿಸುವುದನ್ನೇ ತನ್ನ ಪರಮ ಧರ್ಮವೆಂದು ಭಾವಿಸಿ ಮರುಜನ್ಮ ನೀಡುವವನು ನಿಜವಾದ ವೈದ್ಯ. ಮಾನವನ ಶಾರೀರಿಕ ಆರೋಗ್ಯಕ್ಕೆ ವೈದ್ಯ ಹೇಗೋ, ಹಾಗೆಯೇ ದೇಶದ ಯಾವುದೇ ಒಂದು ಆರ್ಥಿಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ‘ಸನ್ನದು ಲೆಕ್ಕಪರಿಶೋಧಕ’ನ (ಚಾರ್ಟರ್ಡ್ ಅಕೌಂಟೆಂಟ್ – ಸಿಎ) ಪಾತ್ರವೂ ಅಷ್ಟೇ ಪವಿತ್ರವಾದದ್ದು. ಆರ್ಥಿಕ ಜಗತ್ತು ಅವನನ್ನು ನಂಬಿಕೆಯ ಅಧಿಪತಿಯಂತೆ ನೋಡುತ್ತದೆ. ಆದರೆ, ನಮ್ಮ ನಂಬಿಕೆಗಳಿಗಿಂತ ಇಂದಿನ ವಾಸ್ತವವೇ ಬೇರೆಯಾಗಿರುವುದು ಮಾತ್ರ ವಿಪರ್ಯಾಸ. ಪ್ರಸ್ತುತ ನಮ್ಮ ತಾಲೂಕಿನ ಕೋಲಸಿರ್ಸಿ ಗ್ರಾಮ ಸೇವಾ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಗಳ ಹಿನ್ನೆಲೆಯಲ್ಲಿ, ನಾವು ‘ಆರ್ಥಿಕತೆಯ ದೇವರೆಂದು’ ಕುರುಡಾಗಿ ಗೌರವಿಸಿದ ಈ ಸನ್ನದು ಲೆಕ್ಕಪರಿಶೋಧಕರ ನೈತಿಕ ಪತನವನ್ನು ಕಟುವಾಗಿ ವಿಮರ್ಶಿಸುವುದು ಸಧ್ಯದ ಅನಿವಾರ್ಯವೆಂದರೆ ತಪ್ಪಾಗಲಾರದು.”

ಯಾವುದೇ ಒಂದು ಆರ್ಥಿಕ ಅಪರಾಧದಲ್ಲಿ ಕನ್ನ ಹಾಕಿದ ಕಳ್ಳನಿಗಿಂತ, ಕಳ್ಳತನ ನಡೆಯದಂತೆ ಎಚ್ಚರ ವಹಿಸಬೇಕಾಗಿದ್ದ ಕಾವಲುಗಾರನೇ ಕಳ್ಳನೊಂದಿಗೆ ಶಾಮೀಲಾದರೆ ಅಥವಾ ಕಣ್ಣುಮುಚ್ಚಿ ಕುಳಿತರೆ, ಕಾನೂನಿನ ಹಾಗೂ ನೈತಿಕತೆಯ ಕಟಕಟೆಯಲ್ಲಿ ಆ ಕಾವಲುಗಾರನೇ ಪ್ರಧಾನ ಅಪರಾಧಿ ಆಗುತ್ತಾನೆ. ಭಾರತೀಯ ಕಾನೂನೂ ಅದನ್ನೇ ಹೇಳುತ್ತದೆ, ಸಾಮಾನ್ಯ ನ್ಯಾಯದ ತರ್ಕವೂ ಅದನ್ನೇ ಪ್ರತಿಪಾದಿಸುತ್ತದೆ. ಆದರೆ ಇವತ್ತು ನಮ್ಮ ಜಿಲ್ಲೆಗೆ, ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶದ ಹೆಮ್ಮೆಯಾಗಬೇಕಿದ್ದ ಸಹಕಾರಿ ರಂಗದಲ್ಲಿ ನಡೆಯುತ್ತಿರುವುದೇನು?

‘ಒಬ್ಬ ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ’ ಎಂಬ ಉದಾತ್ತ ತತ್ವದೊಂದಿಗೆ ಹುಟ್ಟಿಕೊಂಡದ್ದೇ ಈ ಸಹಕಾರ ಚಳವಳಿ. ಬಡವನಿಗೆ, ಸಣ್ಣ ಕೃಷಿಕನಿಗೆ ಸಾಂಸ್ಥಿಕ ಸಾಲ ಸಿಗದಿದ್ದಾಗ, ಖಾಸಗಿ ಲೇವಾದೇವಿದಾರರ ಬಡ್ಡಿಯ ಸುಳಿಗೆ ಸಿಲುಕಿ ಹಳ್ಳಿಗಳು ನಲುಗುತ್ತಿದ್ದ ಕಾಲದಲ್ಲಿ, ಸಂಕಷ್ಟಕ್ಕೆ ಸಿಲುಕಿದ ಜನ ಸಮೂಹ ಒಗ್ಗೂಡಿ ಕಟ್ಟಿದ ನಂಬಿಕೆಯ ಗೋಪುರವೇ ಈ ಸಹಕಾರಿ ಸಂಘಗಳು. ಅಂಥಹ ಸಹಕಾರಿ ಸಂಘದಲ್ಲಿನ ಒಬ್ಬ ಅಧ್ಯಕ್ಷ, ಅದರ ಆಡಳಿತ ಮಂಡಳಿಯ ಸದಸ್ಯರು ಅಥವಾ ಅದರ ಕಾರ್ಯನಿರ್ವಹಣಾಧಿಕಾರಿ ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ದಾಹಕ್ಕಾಗಿ ಸದಸ್ಯರ ಬೆವರಿನ ಉಳಿತಾಯಕ್ಕೆ ಕನ್ನ ಹಾಕಿರುವ ಹಲವಾರು ಪ್ರಕರಣಗಳನ್ನು ಉದಾಹರಿಸಬಹುದು. ಬೇನಾಮಿ ಸಾಲಗಳನ್ನು ಎತ್ತಿರುವುದು, ಠೇವಣಿಯ ಹಣವನ್ನು ರಿಯಲ್ ಎಸ್ಟೇಟ್ಗೋ, ತಮ್ಮವರ ಜೇಬಿಗೋ ಅಕ್ರಮವಾಗಿ ವರ್ಗಾಯಿಸಿರುವುದು…ಇತ್ಯಾದಿ ಇತ್ಯಾದಿ. ಹೀಗೆ ಇಂಥಹ ಅಕ್ರಮಕ್ಕೆ ನೂರೆಂಟು ದಾರಿಗಳಿರಬಹುದು. ಆದರೆ, ಈ ಎಲ್ಲಾ ಅಕ್ರಮಗಳಿಗೂ ಸಕ್ರಮತೆಯ ಮುದ್ರೆ ಒತ್ತಿ, “ಎಲ್ಲವೂ ಸರಿ ಇದೆ, ಎಲ್ಲವೂ ನಿಯಮಾನುಸಾರವೇ ನಡೆದಿದೆ” ಎಂದು ತನ್ನ ಪವಿತ್ರವಾದ ಸಹಿಯನ್ನು ಹಾಕಿ ಸತ್ಯವನ್ನು ವ್ಯವಸ್ಥಿತವಾಗಿ ಸಮಾಧಿ ಮಾಡುವ ಅರ್ಥವ್ಯವಸ್ಥೆಯ ದೇವರು ಎಂದು ಕರೆಯಲ್ಪಡುವ ಸನ್ನದು ಲೆಕ್ಕಪರಿಶೋಧಕನನ್ನು ನಿಜಕ್ಕೂ ಮೊದಲ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಲ್ಲವೇ?

ಈ ಆರೋಪಗಳು ನಿಮಗೆ ತಪ್ಪೆನಿಸಬಹುದು ಆದರೆ ನಮ್ಮ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರೇ 2017ರ ಸಿಎ ಸಂಸ್ಥಾಪನಾ ದಿನಾಚರಣೆಯ ಬೃಹತ್ ಸಮಾವೇಶದಲ್ಲಿ ಸನ್ನದು ಲೆಕ್ಕಪರಿಶೋಧಕರನ್ನು ಉದ್ದೇಶಿಸಿ ಅವರ ಮೇಲಿರುವ ಜವಾಬ್ದಾರಿಯ ಗಾಂಭೀರ್ಯವನ್ನು ಹೇಗೆ ವಿವರಿಸಿದ್ದರು ಎನ್ನುವುದನ್ನು ನೋಡಿ.

“ಗಡಿಯಲ್ಲಿ ಯೋಧರು ಹೇಗೆ ದೇಶವನ್ನು ಕಾಯುತ್ತಾರೋ, ಹಾಗೆಯೇ ದೇಶದ ಒಳಗೆ ಆರ್ಥಿಕ ಸ್ವಾಸ್ಥ್ಯವನ್ನು ಕಾಪಾಡುವ ಯೋಧರು ನೀವು. ಈ ದೇಶದಲ್ಲಿ ಒಬ್ಬ ಸಿಎಯ ಸಹಿಗೆ ಇರುವ ಶಕ್ತಿ ಪ್ರಧಾನಮಂತ್ರಿಯ ಸಹಿಗಿಂತಲೂ ದೊಡ್ಡದು. ಪ್ರಧಾನಿಯ ಸಹಿಯನ್ನಾದರೂ ಸಂಸತ್ತು ಅಥವಾ ನ್ಯಾಯಾಲಕ ಪ್ರಶ್ನಿಸಬಹುದು; ಆದರೆ ಬ್ಯಾಲೆನ್ಸ್ ಶೀಟ್ ಮೇಲೆ ಒಬ್ಬ ಸಿಎ ಸಹಿ ಬಿದ್ದರೆ ಇಡೀ ಸಮಾಜ ಮತ್ತು ಸರ್ಕಾರ ಅದನ್ನು ಕಣ್ಣುಮುಚ್ಚಿ ನಂಬುತ್ತದೆ”

ಅದೇ ಭಾಷಣದಲ್ಲಿ ಅವರು ಹೇಳುತ್ತಾರೆ, “ತೆರಿಗೆ ವಂಚಕರಿಗೆ, ಕಳ್ಳದಾರಿ ಹುಡುಕುವವರಿಗೆ ದಾರಿ ಮಾಡಿಕೊಡುವವರು ಯಾರು? ನಿಮ್ಮ ಕಕ್ಷಿದಾರರಿಗೆ ಕಳ್ಳದಾರಿ ಹೇಳಿಕೊಡುವ ಬದಲು ದೇಶ ಕಟ್ಟುವ ಪ್ರಾಮಾಣಿಕ ಮಾರ್ಗ ತೋರಿಸಿ” ಎಂದು ಸಿಎಗಳ ಆತ್ಮಸಾಕ್ಷಿಯನ್ನೂ ಬಡಿದೆಬ್ಬಿಸಿದ್ದರು. ಆದರೆ, ಪ್ರಧಾನಿ ಬಣ್ಣಿಸಿದ ಆ ಪವಿತ್ರ ಯೋಧನ ಸ್ಥಾನದಲ್ಲಿ ನಿಲ್ಲಬೇಕಾದ ಸಿಎಗಳು ಇಂದು ಹಳ್ಳಿಗಳಲ್ಲಿ ಕಳ್ಳರಿಗೆ ಕವಚ ತೊಡಿಸುವ ‘ಸಹ-ಅಪರಾಧಿ’ಗಳಾಗಿ ಬದಲಾಗಿರುವುದು ಇಡೀ ವೃತ್ತಿಗೇ ಬಗೆದ ಪರಮ ದ್ರೋಹವೆಂದರೆ ಅದು ಅತಿಶಯೋಕ್ತಿ ಎನಿಸಲಾರದು.

ಇನ್ನು ನಮ್ಮ ಸಹಕಾರಿ ಸಂಘಗಳ ವಿಚಾರಕ್ಕೆ ಬಂದರೆ ಸಂಘದ ಅಧ್ಯಕ್ಷನಿಗೋ (..ನಮ್ಮ ಜಿಲ್ಲೆಯಲ್ಲಿ ಅಧ್ಯಕ್ಷನಾವುದೇ ಒಂದು ದೊಡ್ಡ ಲಾಭಿ, ಅವನ ಶೈಕ್ಷಣಿಕ ಅರ್ಹತೆಗಳು ಯಾವತ್ತೂ ಗೌಣ ಎನ್ನುವುದು ವಾಸ್ತವ) ಅಥವಾ ಅದರ ಮುಖ್ಯಾಧಿಕಾರಿಗೋ ಕಾನೂನಿನ ತಾಂತ್ರಿಕ ಅರಿವು ಇರುವುದಿಲ್ಲ ಎಂಬ ವಾದವನ್ನು ಒಂದು ಕ್ಷಣ ಒಪ್ಪಿಕೊಂಡರೂ, ಸಂಸತ್ತಿನ ಕಾಯಿದೆಯಡಿಯಲ್ಲಿ ವಿಶೇಷ ಪದವಿ ಪಡೆದು, ಸಾರ್ವಜನಿಕ ಹಣದ ಪಾವಿತ್ರ್ಯತೆಯನ್ನು ಕಾಯಲೆಂದೇ ನೇಮಕಗೊಂಡ ‘ವಿಷಯ ತಜ್ಞ’ ಆಡಿಟರ್ ಎಸಗುವ ಈ ಕೃತ್ಯ ಕೇವಲ ನಿರ್ಲಕ್ಷ್ಯವಲ್ಲ ಮತ್ತು ಅದು ಯೋಜಿತ ಕ್ರಿಮಿನಲ್ ಪಿತೂರಿ ಎಂದರೆ ತಪ್ಪಾಗಲಾರದು. ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಮುಚ್ಚಿಡಲು ತನ್ನ ಪವಿತ್ರ ವೃತ್ತಿಪರತೆಯನ್ನೇ ಅಡವಿಟ್ಟ ಲೆಕ್ಕಪರಿಶೋಧಕರುಗಳನ್ನು ಕೇವಲ ಸಾಕ್ಷಿದಾರರನ್ನಾಗಿಯೋ ಅಥವಾ ಸಣ್ಣಪುಟ್ಟ ದಂಡ ವಿಧಿಸಿಯೋ ಬಿಟ್ಟುಬಿಡುತ್ತಿರುವುದೇ ಇಡೀ ಸಹಕಾರಿ ರಂಗದ ಅಥಃಪತನಕ್ಕೆ ಮೂಲ ಕಾರಣ ಅಂತೆನಿಸುತ್ತಿದೆ

‘ಸಾರ್ವಜನಿಕ ಕಾವಲು ನಾಯಿ’ ನರಿಗಳಿಗೆ ಬಾಲ ಅಲ್ಲಾಡಿಸಿದಾಗ!

ಸನ್ನದು ಲೆಕ್ಕಪರಿಶೋಧಕ ಸಂಬಳಕ್ಕೆ ದುಡಿಯುವ ನೌಕರನಲ್ಲ, ಬದಲಾಗಿ ಅವನೊಬ್ಬ ಸ್ವತಂತ್ರ ವೃತ್ತಿಪರ ತಜ್ಞನೆಂದೇ ಎಲ್ಲರೂ ಭಾವಿಸುತ್ತಾರೆ. 1949ರಲ್ಲಿ ಭಾರತೀಯ ಸಂಸತ್ತು ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ (ಐಸಿಎಐ) ಕಾಯಿದೆಯನ್ನು ರೂಪಿಸಿದಾಗ, ಈ ವೃತ್ತಿಗೆ ನೀಡಿದ್ದು ನ್ಯಾಯಾಂಗಕ್ಕೆ ಸಮಾನವಾದ ಪರಮೋಚ್ಛ ನಂಬಿಕೆಯ ಸ್ಥಾನಮಾನವನ್ನು. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಹೇಗೆ ನಿಷ್ಪಕ್ಷಪಾತವಾಗಿ ಸತ್ಯವನ್ನು ಶೋಧಿಸಬೇಕೋ, ಆರ್ಥಿಕ ಜಗತ್ತಿನಲ್ಲಿ ಅವನೂ ಕೂಡ ಹಾಗೆಯೇ ಸತ್ಯಶೋಧಕನಾಗಿರಬೇಕು. ಕಾನೂನಿನ ಭಾಷೆಯಲ್ಲಿ ಈ ಲೆಕ್ಕಪರಿಶೋಧಕನನ್ನು ‘ಸಾರ್ವಜನಿಕ ಹಿತಾಸಕ್ತಿಯ ಕಾವಲು ನಾಯಿ’ ಎಂದು ಕರೆಯಲಾಗುತ್ತದೆ. ಆದರೆ ಇಂದು ಗ್ರಾಮೀಣ ಸಹಕಾರಿ ಸಂಸ್ಥೆಗಳ ವಿಚಾರದಲ್ಲಿ ಈ ಕಾವಲು ನಾಯಿ, ಕನ್ನ ಕೊರೆಯುವ ನರಿಗಳೊಂದಿಗೆ ಕೈಜೋಡಿಸಿ ಬಾಲ ಅಲ್ಲಾಡಿಸುತ್ತಿರುವುದು ದುರಂತವಲ್ಲವೇ..?
ಹಳ್ಳಿಯ ಒಬ್ಬ ಕಡುಬಡವ, ದಿನಗೂಲಿ ಕಾರ್ಮಿಕ ಅಥವಾ ಕೃಷಿಕ ತನ್ನ ದುಡಿಮೆಯ ಹಣವನ್ನು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲೋ ಅಥವಾ ಪಟ್ಟಣದ ಸಹಕಾರಿ ಬ್ಯಾಂಕಿನಲ್ಲೋ ತಂದು ಠೇವಣಿ ಇಡುವುದು ಆ ಸಹಕಾರಿ ಸಂಘದ ಅಢಾವೆ ಪತ್ರಿಕೆಯನ್ನು ಓದಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯದಿಂದಲ್ಲ. ಆ ವರದಿಯ ಯಾವ ವಿವರಣೆಗಳೂ ಅವರಿಗೆ ಅರ್ಥವಾಗುವುದಿಲ್ಲ ಆದರೆ ಅವರೆಲ್ಲ ನಂಬುವುದು ಒಂದೇ “ನಮ್ಮ ದುಡಿಮೆಯ ಹಣಕ್ಕೆ ಸರ್ಕಾರ ನೇಮಿಸಿದ ಆ ಒಬ್ಬ ಲೆಕ್ಕಪರಿಶೋಧಕ ಕಾವಲಿದ್ದಾನೆ, ಆತ ಸಹಿ ಮಾಡಿದ್ದಾನೆ ಎಂದರೆ ಸಂಘ ಸುರಕ್ಷಿತವಾಗಿದೆ” ಎಂದು.
ಅಸಲಿಗೆ ನಮ್ಮ ಜಿಲ್ಲೆಯಂತೆಯೇ ಭಾರತದ ಪ್ರತಿ ಗ್ರಾಮೀಣ ಜನರ ಈ ಅಚಲ ನಂಬಿಕೆಯೇ ಲೆಕ್ಕಪರಿಶೋಧಕರ ವೃತ್ತಿಯ ಅತಿ ದೊಡ್ಡ ಬಂಡವಾಳ ಎಂದರೆ ತಪ್ಪಾಗಲಾರದು. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಪ್ರತಿ ಪ್ರಜ್ಞಾವಂತನೂ ಈ ಬಗ್ಗೆ ಯೋಚಿಸಬೇಕಾಗುತ್ತದೆ. ಗ್ರಾಮೀಣ ಭಾರತದ ಬಡ ರೈತರ, ಶ್ರಮಿಕರ ಈ ಪವಿತ್ರ ನಂಬಿಕೆಯನ್ನು ಈ ವೃತ್ತಿಪರರು ತಮ್ಮ ‘ವೃತ್ತಿ ಶುಲ್ಕ’ದ ತಕ್ಕಡಿಯಲ್ಲಿ ತೂಗಿ ಮಾರಾಟ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಅಂತೆನಿಸುತ್ತದೆ. ಎಷ್ಟೋ ಪ್ರಕರಣಗಳಿವೆ, ಆಡಿಟ್ ಮುಗಿದು ಸಿಎ ಸಹಿ ಬಿದ್ದ ಮರುದಿನವೇ ಸಂಸ್ಥೆಗಳು ದಿವಾಳಿಯಾಗುತ್ತವೆ, ಠೇವಣಿದಾರರು ರಸ್ತೆಗೆ ಬೀಳುತ್ತಾರೆ, ಸಿಇಒಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಕೋಟಿ ಕೋಟಿ ನಗದು ಜಪ್ತಿ ಮಾಡುತ್ತಾರೆ! ಹಾಗಾದರೆ ವರ್ಷಗಟ್ಟಲೆ ಆಡಿಟ್ ಮಾಡಿದ ಈ ಮಹಾನುಭಾವರು ತಮ್ಮ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರೇ? ಅಥವಾ ಲೆಕ್ಕ ಪರಿಶೋಧನೆಯ ಹೆಸರಿನಲ್ಲಿ ತಮ್ಮ ವೃತ್ತಿಧರ್ಮಕ್ಕೆ ತಮ್ಮ ಕರ್ತವ್ಯಕ್ಕೆ ದ್ರೋಹವೆಸಿಗದ್ದರೇ…?

ಒಂದೇ ದಿನದ ಅಡಿಟ್..! ಮಾರಾಟವಾಗುತ್ತಿದೆಯಾ ‘ಸಗಟು ಸಹಿ’?

ಸಹಕಾರಿ ಲೆಕ್ಕಪರಿಶೋಧನಾ ಜಾಲದಲ್ಲಿ ಇಂದು ತಲೆಎತ್ತಿರುವ ಅತಿ ದೊಡ್ಡ ಪಿಡುಗು ಎಂದರೆ ‘ಕಚೇರಿಯ ಮೆಟ್ಟಿಲನ್ನೇ ಹತ್ತದೆ ಆಡಿಟ್ ಮುಗಿಸುವ ಪದ್ದತಿ’. ಸಾಮಾನ್ಯವಾಗಿ ವಾರ್ಷಿಕ ಲೆಕ್ಕಪರಿಶೋಧನೆ ಎಂದರೆ ಆಡಿಟರ್ ಖುದ್ದಾಗಿ ಅಥವಾ ಅವರ ಪರಿಣಿತ ತಂಡ ಸಂಘದ ಕಚೇರಿಗೆ ಭೇಟಿ ನೀಡಬೇಕು ಮತ್ತು ಸಂಘದ ಪ್ರತಿಯೊಂದು ದಾಖಲೆಗಳನ್ನೂ ಕೂಲಂಕುಷವಾಗಿ ತಪಾಸಣೆ ಮಾಡಬೇಕು. ಆದರೆ ವಾಸ್ತವದಲ್ಲಿ ಏನು ನಡೆಯುತ್ತಿದೆ? ಲಭ್ಯ ಮಾಹಿತಿಗಳ ಪ್ರಕಾರ ಕೆಲವು ಲೆಕ್ಕಪರಿಶೋಧಕರು ನೂರಾರು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯ ಸಂಘಗಳ ಮುಖವನ್ನೇ ನೋಡುವುದಿಲ್ಲ. ಸಂಘದ ಆಡಳಿತ ಮಂಡಳಿಯೇ ಸಿದ್ಧಪಡಿಸಿ ಕೊಡುವ ರೆಡಿಮೇಡ್ ಹಣಕಾಸು ತಖ್ತೆಃಗಳನ್ನು ಮೇಜಿನ ಮೇಲಿಟ್ಟುಕೊಂಡು, ಕೇವಲ ‘ಸಗಟು’ ರೂಪದಲ್ಲಿ ಸಹಿ ಹಾಕಿ ಕೊಡುವ ಪ್ರಕರಣಗಳು ಸಾಕಷ್ಟು ಇವೆ. ಇನ್ನು ಕೆಲವು ಲೆಕ್ಕಪರಿಶೋಧಕರು ಕೆಲಸದ ಒತ್ತಡದ ಸಬೂಬು ಹೇಳಿ ವರ್ಷಪೂರ್ತಿ ನಡೆದ ಸಹಕಾರಿ ಸಂಘಗಳ ಹಣಕಾಸು ವ್ಯವಹಾರಗಳನ್ನು ಕೇವಲ ಒಂದೇ ದಿನದಲ್ಲಿ ತಪಾಸಣೆ ಮಾಡಿ ಮುಗಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ವಿಧಾನಮಂಡಲದ ಅಧಿವೇಶನದಲ್ಲೇ ಅಂದಿನ ಸಹಕಾರ ಸಚಿವರು ಈ ಹಸಿಹಸಿ ಸತ್ಯವನ್ನು ಸದನದ ಮುಂದಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದರು. ಒಬ್ಬ ಆಡಿಟರ್ ವರ್ಷಕ್ಕೆ ಎಷ್ಟು ಸಹಕಾರಿ ಸಂಘಗಳ ಆಡಿಟ್ ಮಾಡಬಹುದು ಎಂಬ ಗರಿಷ್ಠ ಸಂಖ್ಯಾ ಮಿತಿ ಕಾಯಿದೆಯಲ್ಲಿ ಇಲ್ಲದಿರುವುದನ್ನು ಬಂಡವಾಳ ಮಾಡಿಕೊಂಡ ಕೆಲವರು, ನೂರಾರು ಸಂಘಗಳ ಆಡಿಟ್ ಹೊಣೆಗಾರಿಕೆಯನ್ನು ಗುತ್ತಿಗೆ ಹಿಡಿದವರಂತೆ ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ಮಾನವ ಸಹಜವಾಗಿ ಒಬ್ಬ ಲೆಕ್ಕಪರಿಶೋಧಕ ವರ್ಷದಲ್ಲಿ ಎಷ್ಟು ಸಹಕಾರಿ ಸಂಘಗಳ ಪ್ರತಿಯೊಂದು ರಸೀದಿ, ವೋಚರ್, ಸಾಲದ ಕಡತಗಳನ್ನು ಆಳವಾಗಿ ತಪಾಸಣೆ ಮಾಡಲು ಸಾಧ್ಯ? ಆದರೆ ಇಂದು ಒಬ್ಬನೇ ಲೆಕ್ಕಪರಿಶೋಧಕ 30-50 ಸಹಕಾರಿಯ ಲೆಕ್ಕಪರಿಶೋಧನೆಯನ್ನು ನಡೆಸುವುದನ್ನು ನಾವು ನೋಡಬಹುದಾಗಿದೆ. ಇಷ್ಟೊಂದು ಸಹಕಾರಿ ಸಂಘಗಳ ತಪಾಸಣೆ ಅಸಾಧ್ಯವೆಂದು ಗೊತ್ತಿದ್ದರೂ ಈ ಇಂಥಹ ಪ್ರವೃತ್ತಿ ರಾಜಾರೋಷವಾಗಿ ಮುಂದುವರಿದಿದೆ. ಹಾಗಾಗಿ ಇದು ವೃತ್ತಿಪರತೆಯಲ್ಲ, ಇದು ಕಟು ವ್ಯಾಪಾರ ಮತ್ತು ವ್ಯವಸ್ಥಿತ ವಂಚನೆ ಎಂದರೆ ತಪ್ಪಾಗಲಾರದು.

ಉತ್ತರ ಕನ್ನಡದ ನಿದರ್ಶನ: ಕಣ್ಣೆದುರೇ ಕುಸಿದ ನಂಬಿಕೆಯ ಬುಡಕಟ್ಟು

ಸಹಕಾರ ಚಳವಳಿಯ ಪವಿತ್ರ ಭೂಮಿ ಎಂದೇ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ರೂಪದಲ್ಲಿ ಬಯಲಾಗುತ್ತಿರುವ ಅಕ್ರಮಗಳನ್ನು ಗಮನಿಸಿದರೆ, ಆಡಿಟರ್ಗಳು ಹೇಗೆ ನಿದ್ದೆಗೆ ಜಾರಿದ್ದಾರೆ ಅಥವಾ ಜಾಣ ಕುರುಡು ಪ್ರದರ್ಶಿಸಿದ್ದಾರೆ ಎಂಬುದು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.
ಸಿದ್ದಾಪುರ ತಾಲೂಕಿನ ಪ್ರತಿಷ್ಠಿತ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಪ್ರಕರಣವನ್ನೇ ತೆಗೆದುಕೊಳ್ಳಿ. ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಕ್ರಮ ಸಂಪತ್ತಿನ ಮೇಲೆ ಲೋಕಾಯುಕ್ತ ದಾಳಿ ನಡೆದು, ಕೋಟ್ಯಂತರ ರೂಪಾಯಿಗಳ ಬೇನಾಮಿ ಆಸ್ತಿಪಾಸ್ತಿಗಳು ಜಪ್ತಿಯಾದಾಗ ಸ್ಥಳೀಯ ಸಹಕಾರಿ ವ್ಯವಸ್ಥೆಯೇ ಸ್ತಬ್ಧವಾಯಿತು. ಕೃಷಿಕರ, ಕೂಲಿ ಕಾರ್ಮಿಕರ ಬೆವರಿನ ಹನಿಗಳು ಹೀಗೆ ಒಬ್ಬ ವ್ಯಕ್ತಿಯ ಅಕ್ರಮಕ್ಕೆ ಬಲಿಪಶುವಾಗಿದ್ದು ಹೇಗೆ? ಈ ಪ್ರಶ್ನೆಗೆ ಆಡಳಿತದ ಭ್ರಷ್ಟಾಚಾರ ಒಂದು ಮುಖವಾದರೆ, ಅದಕ್ಕಿಂತ ಕರಾಳವಾದ ಮುಖ ಈ ಸಂಘಕ್ಕೆ ಪ್ರತಿವರ್ಷ ‘ಎ’ ಗ್ರೇಡ್ ಅಥವಾ ‘ಆಲ್ ಈಸ್ ವೆಲ್’ ಎಂದು ಕ್ಲೀನ್ ಚಿಟ್ ಸರ್ಟಿಫಿಕೇಟ್ ಬರೆದುಕೊಟ್ಟ ಆಡಿಟರ್ಗಳದ್ದು.
ಇದೇ ರೀತಿ ಶಿರಸಿ, ಕುಮಟಾ, ಅಂಕೋಲಾ ಮತ್ತು ಕಾರವಾರದ ಹಲವು ಪಟ್ಟಣ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟಿ ಕೋಟಿ ಲೂಟಿ ಮಾಡಲಾಯಿತು. ಮೃತಪಟ್ಟ ರೈತರ ಹೆಸರಿನಲ್ಲಿ ಸಾಲಗಳನ್ನು ನವೀಕರಿಸಿ ಜೀವಂತವಾಗಿರುವಂತೆ ಕಾಗದ ಸೃಷ್ಟಿಸಲಾಯಿತು. ಹಲವು ಸಂಘಗಳಲ್ಲಿ ಠೇವಣಿದಾರರು ತಮ್ಮದೇ ಹಣವನ್ನು ಮರಳಿ ಪಡೆಯಲು ಕಚೇರಿಯ ಮುಂದೆ ಕಣ್ಣೀರು ಹಾಕುತ್ತಾ ಧರಣಿ ಕೂರುವ ಸ್ಥಿತಿ ನಿರ್ಮಾಣವಾಯಿತು.
ಈ ಎಲ್ಲಾ ದುರಂತಗಳಲ್ಲೂ ಒಂದು ಸಾಮ್ಯತೆಯಿದೆ: ಯಾವುದೇ ಒಂದು ಸಹಕಾರಿ ಸಂಸ್ಥೆ ಕುಸಿಯುವ ಮುನ್ನಾದಿನದವರೆಗೂ, ಅದರ ಹಿಂದಿನ ವರ್ಷದ ಆಡಿಟ್ ವರದಿಯಲ್ಲಿ ಯಾವುದೇ ಗಂಭೀರ ಆರ್ಥಿಕ ಅಪಾಯದ ಎಚ್ಚರಿಕೆಯ ಗಂಟೆ ಬಾರಿಸಿರುವುದೇ ಇಲ್ಲ! ಪ್ರತಿಯೊಂದು ವರದಿಯಲ್ಲೂ ಆಡಳಿತದ ಲೋಪಗಳನ್ನು ಸಣ್ಣಪುಟ್ಟ ಕಾರಕೂನ ತಪ್ಪುಗಳೆಂದು ಮರೆಮಾಚಿ, ಮೂಲಭೂತ ಅವ್ಯವಹಾರಗಳಿಗೆ ರಕ್ಷಣಾ ಕವಚ ನಿರ್ಮಿಸಿಕೊಡಲಾಗಿರುತ್ತದೆ. ಕಳ್ಳತನ ನಡೆಯುತ್ತಿದ್ದಾಗ ಬಾಯಿ ಮುಚ್ಚಿಕೊಂಡಿದ್ದು ಮಾತ್ರವಲ್ಲದೆ, ಕಳ್ಳನ ಕೈಗೆ ಕೀಲಿ ಕೊಟ್ಟ ಇಂತಹ ಆಡಿಟರ್ಗಳನ್ನು ಅಪರಾಧದ ಕೇಂದ್ರಬಿಂದುವನ್ನಾಗಿ ಮಾಡದೆ ಸಹಕಾರ ರಂಗವನ್ನು ಉಳಿಸಲು ಸಾಧ್ಯವೇ?

ಹೊಂದಾಣಿಕೆಯ ಸಂಸ್ಕೃತಿ ಮತ್ತು ಲೆಕ್ಕಪರಿಶೋಧಕರ ನೈತಿಕ ಅಧಃಪತನ.

ಒಂದು ಕಾಲದಲ್ಲಿ ಸಹಕಾರಿ ಸಂಘದ ಕಚೇರಿಗೆ ಆಡಿಟರ್ ಬರುತ್ತಾರೆ ಎಂದರೆ, ಅಧ್ಯಕ್ಷನಿಂದ ಹಿಡಿದು ಜವಾನನವರೆಗೂ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ದಾಖಲೆಗಳಲ್ಲಿ ನಯಾಪೈಸೆ ವ್ಯತ್ಯಾಸವಿದ್ದರೂ ಆಡಿಟರ್ ಬಿಡುವುದಿಲ್ಲ ಎಂಬ ಭೀತಿಯೇ ಅಕ್ರಮಗಳನ್ನು ತಡೆದು ನಿಲ್ಲಿಸುವ ದೊಡ್ಡ ಬೇಲಿಯಾಗಿತ್ತು. ಆದರೆ ಇವತ್ತು ಪರಿಸ್ಥಿತಿ ತದ್ವಿರುದ್ಧವಾಗಿದೆ. ಆಡಿಟರ್ ಬರುವುದು ಸಂಘದ ಅತಿಥಿಯಂತೆ; ಆಡಳಿತ ಮಂಡಳಿಯ ಆತಿಥ್ಯ ಸ್ವೀಕರಿಸಿ, ಅವರು ಬರೆದುಕೊಟ್ಟ ಲೆಕ್ಕಕ್ಕೆ ಮುದ್ರೆ ಒತ್ತಿ, ನಿಗದಿತ ‘ಫೀಸ್’ ಪಡೆದುಕೊಳ್ಳುವ ಒಂದು ಸ್ನೇಹಪರ ಕಾಂಟ್ರಾಕ್ಟ್ ಆಗಿ ಲೆಕ್ಕಪರಿಶೋಧನೆ ಬದಲಾಗಿದೆ.
ನಿಯಮಗಳ ಪ್ರಕಾರ ಮಹಾಸಭೆಯಲ್ಲಿ ಸದಸ್ಯರೇ ಪ್ಯಾನೆಲ್ನಿಂದ ಆಡಿಟರ್ ಅನ್ನು ಆಯ್ಕೆ ಮಾಡಬೇಕು. ಆದರೆ ಪ್ರಾಯೋಗಿಕವಾಗಿ ಆಡಳಿತ ಮಂಡಳಿಯು ತಮಗೆ ‘ಅನುಕೂಲಕರವಾಗಿರುವ’, ತಮ್ಮ ಅಕ್ರಮಗಳಿಗೆ ತಲೆಯಾಡಿಸುವ, ಜಾಣ ಕುರುಡು ಪ್ರದರ್ಶಿಸುವ ಆಡಿಟರ್ಗಳ ಹೆಸರನ್ನು ಮಾತ್ರ ಪ್ಯಾನೆಲ್ನಿಂದ ಆರಿಸಿ ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತದೆ. ಪ್ರಾಮಾಣಿಕವಾಗಿ ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಆಕ್ಷೇಪಣೆಗಳನ್ನು ದಾಖಲಿಸುವ ಕಠಿಣ ಆಡಿಟರ್ಗಳನ್ನು ಮುಂದಿನ ವರ್ಷವೇ ಕಿತ್ತೊಗೆಯಲಾಗುತ್ತದೆ.
ವೃತ್ತಿಪರತೆಯ ಪರಮೋಚ್ಛ ಶಿಖರದಲ್ಲಿ ನಿಲ್ಲಬೇಕಾದ ಅನೇಕ ಲೆಕ್ಕಪರಿಶೋಧಕರು ಈ ‘ಕಕ್ಷಿದಾರನನ್ನು ಕಳೆದುಕೊಳ್ಳುವ ಭಯ’ಕ್ಕೆ ಬಿದ್ದು ತಮ್ಮ ನೈತಿಕತೆಯನ್ನೇ ಬಲಿಕೊಡುತ್ತಿದ್ದಾರೆ. “ನಾನು ತಪ್ಪು ಹುಡುಕಿದರೆ ನನಗೆ ಮುಂದಿನ ವರ್ಷ ಆಡಿಟ್ ಸಿಗುವುದಿಲ್ಲ, ಇನ್ನೊಬ್ಬ ಸಿಎ ಬಂದು ಸಹಿ ಹಾಕಿ ಹೋಗುತ್ತಾನೆ; ಹಾಗಾಗಿ ನಾನೇಕೆ ಧರ್ಮಯುದ್ಧ ಮಾಡಬೇಕು?” ಎಂಬ ಅಪಾಯಕಾರಿ ಆತ್ಮಹತ್ಯಾ ಮನಸ್ಥಿತಿ ಇಂದು ಸಿಎ ಸಮುದಾಯದ ಒಂದು ವರ್ಗವನ್ನು ಆವರಿಸಿದೆ. ಈ ಹೊಂದಾಣಿಕೆಯ ಪರಿಣಾಮವಾಗಿ ಬಲಿಯಾಗುತ್ತಿರುವುದು ಮಾತ್ರ ಇಡೀ ಬದುಕಿನ ಆಸರೆಯನ್ನು ಸಹಕಾರಿಯಲ್ಲಿ ಒತ್ತೆಇಟ್ಟು ಬದುಕುತ್ತಿರುವ ಗ್ರಾಮೀಣ ಬಡ ಜನತೆ ಮಾತ್ರ.

ಕಾನೂನೂಗಳೇ ಕಟ್ಟುನಿಟ್ಟಾಗಬೇಕು.

ಸಹಕಾರ ರಂಗದಲ್ಲಿ ನಡೆಯುವ ಆರ್ಥಿಕ ಅನಾಚಾರಗಳ ವಿಚಾರದಲ್ಲಿ ಕಾನೂನು ಸಂಪೂರ್ಣ ಕುರುಡಾಗಿಯೇನೂ ಕುಳಿತಿಲ್ಲ. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಸೆಕ್ಷನ್ 63(17) ಲೆಕ್ಕಪರಿಶೋಧಕನ ಮೇಲೆ ಅತ್ಯಂತ ನಿಷ್ಠುರವಾದ ಹೊಣೆಗಾರಿಕೆಯನ್ನು ಹೊರಿಸಿದೆ. ಯಾವುದೇ ಸಂಸ್ಥೆಯಲ್ಲಿ ಹಣದ ದುರುಪಯೋಗ, ವಂಚನೆ, ನಕಲಿ ದಾಖಲೆ ಸೃಷ್ಟಿ ಅಥವಾ ನಿಯಮಬಾಹಿರ ವಹಿವಾಟುಗಳು ಗೋಚರಿಸಿದರೆ, ಆಡಿಟರ್ ಅದನ್ನು ಕೇವಲ ಕಾಟಾಚಾರಕ್ಕೆ ಉಲ್ಲೇಖಿಸಿ ಕೈತೊಳೆದುಕೊಳ್ಳುವಂತಿಲ್ಲ. ಆ ವಂಚನೆಯ ಆಳ ಅಗಲ, ಕಾರ್ಯಾಚರಣೆಯ ಸಂಪೂರ್ಣ ವಿಧಾನ, ದುರುಪಯೋಗವಾದ ನಿಖರ ಮೊತ್ತ ಮತ್ತು ಅದಕ್ಕೆ ನೇರ ಹೊಣೆಗಾರರಾದ ವ್ಯಕ್ತಿಗಳ ಹೆಸರುಗಳನ್ನು ಸಾಕ್ಷ್ಯಸಹಿತ ವರದಿಯಲ್ಲಿ ಎಳೆಎಳೆಯಾಗಿ ದಾಖಲಿಸಬೇಕೆಂಬುದು ಕಾಯ್ದೆಯಲ್ಲಿ ಕಡ್ಡಾಯವಾಗಿ ಆದೇಶ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಈ ಕಾನೂನಿನ ನಿಯಮಗಳೆಲ್ಲ ಕಾಗದದ ಹುಲಿಯಾಗಿಯೇ ಉಳಿದುಕೊಂಡಿವೆ. ಕೋಟಿ ಕೋಟಿ ರೂಪಾಯಿಗಳ ಸಹಕಾರಿ ಹಗರಣಗಳು ಬಯಲಿಗೆ ಬಂದಾಗಲೆಲ್ಲ ಸಹಕಾರ ಇಲಾಖೆಯಾಗಲಿ ಅಥವಾ ಪೊಲೀಸರಾಗಲಿ ಕೇವಲ ಅಧ್ಯಕ್ಷ, ಉಪಾಧ್ಯಕ್ಷ ಇಲ್ಲವೇ ಸಿಇಒ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿ ಪ್ರಕರಣಕ್ಕೆ ತೆರೆ ಎಳೆಯುತ್ತಾರೆ. ಅಸಲಿಗೆ ಈ ಲೂಟಿಗೆ ಸಕ್ರಮತೆಯ ಸೋಗು ತೊಡಿಸಿದ ಆಡಿಟರ್‌ನನ್ನು ಕೇವಲ ಒಬ್ಬ ತಟಸ್ಥ ಸಾಕ್ಷಿಯನ್ನಾಗಿ ಪರಿಗಣಿಸಿ ವಿಚಾರಣೆಯ ನೆಪದಲ್ಲಿ ಕೈಬಿಡಲಾಗುತ್ತದೆ. ತೀರಾ ಒತ್ತಡ ಬಂದರೆ ಆತನ ಹೆಸರನ್ನು ಇಲಾಖೆಯ ಆಡಿಟರ್ ಪ್ಯಾನೆಲ್‌ನಿಂದ ತಾತ್ಕಾಲಿಕವಾಗಿ ಅಮಾನತು ಮಾಡುವುದೇ ಇಲಾಖೆ ತೋರುತ್ತಿರುವ ಪರಮಾವಧಿ ಕ್ರಮವಾಗಿದೆ. ನೂರಾರು ಕೋಟಿ ಸಾರ್ವಜನಿಕ ಠೇವಣಿ ಲೂಟಿಯಾಗಲು ರಾಜಮಾರ್ಗ ನಿರ್ಮಿಸಿಕೊಟ್ಟವನಿಗೆ ಪ್ಯಾನೆಲ್‌ನಿಂದ ಹೊರಗಿಡುವುದು ಯಾವ ಲೆಕ್ಕದ ಶಿಕ್ಷೆ? ಇನ್ನು ಲೆಕ್ಕಪರಿಶೋಧಕ ಸಂಸ್ಥೆಯ ಶಿಸ್ತು ಸಮಿತಿಯ ಕದ ತಟ್ಟಿದರೆ, ಅಲ್ಲಿನ ವಿಚಾರಣೆಗಳಿಂದ ಸಂತ್ರಸ್ತರಿಗೆ ನ್ಯಾಯ ಸಿಗಬಹುದೆಂಬ ಭರವಸೆಯೂ ಇಲ್ಲ..
ಹೀಗೆ ಅಣಕದಂತಿರುವ ಶಿಕ್ಷೆಯ ಮಾದರಿ ಬದಲಾಗಬೇಕಾದರೆ ಇಡೀ ವ್ಯವಸ್ಥೆಗೆ ತಕ್ಷಣವೇ ಕ್ರಿಮಿನಲ್ ಮೊನಚು ಸಿಗಬೇಕಿದೆ. ಸಹಕಾರಿ ಸಂಸ್ಥೆಯಲ್ಲಿ ವ್ಯವಸ್ಥಿತ ಅಕ್ರಮ ನಡೆದು, ಅದನ್ನು ಆಡಿಟರ್ ತನ್ನ ವರದಿಯಲ್ಲಿ ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾದ ತಕ್ಷಣವೇ, ಆತನನ್ನು ಅಪರಾಧದ ಪ್ರಮುಖ ಅಫರಾಧಿ ಎಂದು ಪರಿಗಣಿಸಿ ಎಫ್‌ಐಆರ್‌ನಲ್ಲಿ ನೇರವಾಗಿ ಪ್ರಧಾನ ಆರೋಪಿಯನ್ನಾಗಿ ಸೇರಿಸುವ ಕಡ್ಡಾಯ ನಿಯಮ ಜಾರಿಯಾಗಬೇಕು. ಇದರ ಜೊತೆಗೆ, ಕಾಯಿದೆಯ ಸೆಕ್ಷನ್ 69ರ ಸರ್‌ಚಾರ್ಜ್ ಕ್ರಮವನ್ನು ಕೇವಲ ಆಡಳಿತ ಮಂಡಳಿಗೆ ಸೀಮಿತಗೊಳಿಸದೆ, ಅಕ್ರಮಕ್ಕೆ ಕ್ಲೀನ್ ಚಿಟ್ ನೀಡಿದ ಆಡಿಟರ್‌ನ ವೈಯಕ್ತಿಕ ಚರ-ಸ್ಥಿರ ಆಸ್ತಿಗಳ ಮೇಲೂ ವಿಸ್ತರಿಸಬೇಕು; ಆತನ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡು ವಂಚನೆಗೊಳಗಾದ ಮುಗ್ಧ ಠೇವಣಿದಾರರ ನಷ್ಟವನ್ನು ತುಂಬಿಸಿಕೊಡುವ ಕಠಿಣ ಶಾಸನಬದ್ಧ ಚೌಕಟ್ಟು ನಿರ್ಮಾಣವಾಗಬೇಕು. ವೃತ್ತಿಧರ್ಮಕ್ಕೆ ಕೊಳ್ಳಿಯಿಟ್ಟ ವೃತ್ತಿಪರರ ಸನ್ನದನ್ನು ಸಾರಾಸಗಟಾಗಿ ಶಾಶ್ವತ ರದ್ದುಗೊಳಿಸುವುದರ ಜೊತೆಗೆ, ನಿಜವಾದ ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎನ್ನುವುದನ್ನು ನಿರೂಪಿಸಬೇಕಾದ ಅನಿವಾರ್ಯತೆ ಖಂಡಿತ ಇದೆ.

ಸದಸ್ಯರು ಜಾಗೃತವಾಗದಿದ್ದರೆ ಯಾರೂ ಕಾಯುವುದಿಲ್ಲ..

ಬಹುತೇಕ ಸಹಕಾರಿಗಳ ಆಡಳಿತ ಮಂಡಳಿ ರಾಜಕೀಯ ಪ್ರಭಾವದಿಂದ ಕೂಡಿರುವುದು ಸತ್ಯಕ್ಕೆ ದೂರವಾದ ವಿಷಯವೇನಲ್ಲ. ಇದರ ಜೊತೆಯಲ್ಲೇ ಆಡಿಟರ್ ಕೂಡ ಆಡಳಿತ ಮಂಡಳಿಯೊಂದಿಗೆ ರಾಜಿಯಾಗಿದ್ದಾನೆ ಎಂದಮೇಲೆ ಇವರಿಬ್ಬರನ್ನೂ ನಂಬಿ ಕೂರುವ ಮುಗ್ಧತೆಗೆ ಸದಸ್ಯರು ತಕ್ಷಣವೇ ತಿಲಾಂಜಲಿ ಇಡಬೇಕು. ತನ್ನ ಬೆವರಿನ ಹಣಕ್ಕೆ ತಾನೇ ಕಾವಲುಗಾರನಾಗದಿದ್ದರೆ ಯಾವ ಸರ್ಕಾರವೂ ಬಂದು ಹಣ ಉಳಿಸುವುದಿಲ್ಲ ಎಂಬುದನ್ನು ಸದಸ್ಯ ಸಮುದಾಯ ಅರ್ಥಮಾಡಿಕೊಳ್ಳಬೇಕು.
ವಾರ್ಷಿಕ ಮಹಾಸಭೆಯ ದಿನ ಊಟ ಮಾಡಿ ಕೈ ಎತ್ತುವ ಸಂಸ್ಕೃತಿಯಿಂದ ಸದಸ್ಯರು ಹೊರಬರಬೇಕು. ಸಭೆಗಿಂತ ಒಂದು ವಾರ ಮೊದಲೇ ಆಡಿಟ್ ವರದಿಯನ್ನು ಪಡೆದು ಪರಿಶೀಲಿಸುವ ಹಕ್ಕನ್ನು ಚಲಾಯಿಸಬೇಕು.
ಮಹಾಸಭೆಗೆ ಕಡ್ಡಾಯವಾಗಿ ಆಡಿಟರ್ ಹಾಜರಿರಬೇಕು ಎಂದು ಪಟ್ಟುಹಿಡಿಯಬೇಕು. ಸಭೆಯಲ್ಲಿ ಆಡಿಟರ್ನನ್ನು ಮುಖಾಮುಖಿ ಕೂರಿಸಿ, ಸಹಕಾರಿಯಲ್ಲಿ ನಡೆಯುತ್ತಿರುವ ಯಾವುದೇ ಅಸಹಜ ವ್ಯವಹಾರಗಳ ಬಗ್ಗೆ ಅಥವಾ ಸದಸ್ಯರುಗಳು ತಮ್ಮ ಎಲ್ಲ ಸಂದೇಹಗಳನ್ನು ಚರ್ಚಿಸಬೇಕು.
ಯಾವುದೇ ಕಾರಣಕ್ಕೂ ಒಬ್ಬನೇ ಲೆಕ್ಕಪರಿಶೋಧಕ ಸತತ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಆಡಿಟ್ ವಹಿಸಬಾರದು. ಪ್ರತಿ ಎರಡು ವರ್ಷಕ್ಕೊಮ್ಮೆ ಆಡಿಟರ್ ಬದಲಾವಣೆಯನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಮಹಾಸಭೆಯಲ್ಲೇ ಪಾಸ್ ಮಾಡಬೇಕು.

ಕೊನೆ ಮಾತು: ನಂಬಿಕೆಯನ್ನು ಉಳಿಸಿಕೊಳ್ಳೋಣ…
ಸಹಕಾರ ಎನ್ನುವುದು ಈ ನೆಲದ ಗ್ರಾಮೀಣ ಜನರ ಪಾಲಿನ ಕಾಮಧೇನು. ಮಣ್ಣನ್ನು ನಂಬಿ ಬದುಕುವ ರೈತನಿಗೆ, ಸಣ್ಣ ವ್ಯಾಪಾರಿಗೆ, ಸಂಕಷ್ಟದ ಕಾಲದಲ್ಲಿ ಕೈಹಿಡಿಯುವ ಸಂಜೀವಿನಿ. ಇಂತಹ ಅದ್ಭುತ ಆಶಯದ ಚಳವಳಿ ಇಂದು ಸಮಾಧಿ ಸೇರುತ್ತಿರುವುದು ಹೊರಗಿನ ಶತ್ರುಗಳಿಂದಲ್ಲ; ಒಳಗೇ ಇರುವ ಭ್ರಷ್ಟ ಆಡಳಿತ ಹಾಗೂ ಅವರಿಗೆ ರಕ್ಷಣಾ ಕವಚವಾಗಿ ನಿಂತಿರುವ ವೃತ್ತಿಭ್ರಷ್ಟ ಲೆಕ್ಕಪರಿಶೋದಕರುಗಳಿಂದ.
ರೋಗ ಉಲ್ಬಣಿಸಿದಾಗ ಕೇವಲ ಮುಲಾಮು ಹಚ್ಚಿದರೆ ಸಾಲದು, ಶಸ್ತ್ರಚಿಕಿತ್ಸೆಯೇ ಆಗಬೇಕು. ಸಹಕಾರಿ ರಂಗವನ್ನು ಉಳಿಸಬೇಕಾದರೆ, ಮೊದಲು ಲೆಕ್ಕಪರಿಶೋಧನಾ ಕ್ಷೇತ್ರಕ್ಕೆ ಅಂಟಿರುವ ಈ ನೈತಿಕ ಪಾರ್ಶ್ವವಾಯುವನ್ನು ಹೊಡೆದೋಡಿಸಬೇಕು. ಕನ್ನ ಹಾಕಿದ ಅಧ್ಯಕ್ಷ, ಸಿಇಒಗಳನ್ನು ಜೈಲಿಗಟ್ಟುವಷ್ಟೇ ವೇಗವಾಗಿ, ಆ ಕನ್ನಕ್ಕೆ ಸಕ್ರಮತೆಯ ಮುದ್ರೆ ಒತ್ತಿದ ಲೆಕ್ಕಪರಿಶೋಧಕರ ಕೈಗೆ ಬೇಡಿ ತೊಡಿಸುವ ಕಾನೂನು ಇಚ್ಛಾಶಕ್ತಿ ಪ್ರದರ್ಶಿತವಾಗಬೇಕು. ಕಾವಲುಗಾರನೇ ಕಳ್ಳನಾದ ಈ ಕರಾಳ ಪರ್ವ ಕೊನೆಗೊಳ್ಳದಿದ್ದರೆ, ಸಹಕಾರ ಎಂಬುದು ಇತಿಹಾಸದ ಪುಟಗಳಲ್ಲಿ ಕೇವಲ ಒಂದು ಕಹಿ ಅಧ್ಯಾಯವಾಗಿ ಉಳಿದುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸಹಕಾರಿ ಸೇರಿದಂತೆ…. ನಾನಾ ಕ್ಷೇತ್ರಗಳ ಕೀಲಿಕೈ ಕಳ್ಳನ ಕೈ ಸೇರಿದರೆ ಅಪಾಯ!!!

ಕನ್ನ ಹಾಕಿದವರಿಗಿಂತ ಕಾವಲು ನಿಂತು ಕಣ್ಣುಮುಚ್ಚಿದವನೇ ಪ್ರಧಾನ ಆರೋಪಿ!?(ಸಹಕಾರಿ ರಂಗದ ರಕ್ಷಾ ಕವಚವಾದ ಸನ್ನದು ಲೆಕ್ಕಪರಿಶೋಧಕರ ನೈತಿಕ ಅಧಃಪತನದ ಕರಾಳ ದರ್ಶನ) “ಭಾರತೀಯ ಸಂಸ್ಕೃತಿಯಲ್ಲಿ...

namdhari-issue- part-01 – ಚರಿತ್ರೆಯಿಂದ ಪಾಠ ಕಲಿಯಿರಿ… ವಿವೇಕದಿಂದ ಮುಂದುವರಿಯಿರಿ….

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ...

ಭಿತ್ತಿಯ ಚಿತ್ರ ಬಿ. ಡಿ. ಹಿರೇಮಠ

ಬಿ. ಡಿ. ಹಿರೇಮಠ… ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ...

ಶಾಲೆಗೆ ಹೋಗದ ರಾಜ!

ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

Latest Posts

ಸಹಕಾರಿ ಸೇರಿದಂತೆ…. ನಾನಾ ಕ್ಷೇತ್ರಗಳ ಕೀಲಿಕೈ ಕಳ್ಳನ ಕೈ ಸೇರಿದರೆ ಅಪಾಯ!!!

ಕನ್ನ ಹಾಕಿದವರಿಗಿಂತ ಕಾವಲು ನಿಂತು ಕಣ್ಣುಮುಚ್ಚಿದವನೇ ಪ್ರಧಾನ ಆರೋಪಿ!?(ಸಹಕಾರಿ ರಂಗದ ರಕ್ಷಾ ಕವಚವಾದ ಸನ್ನದು ಲೆಕ್ಕಪರಿಶೋಧಕರ ನೈತಿಕ ಅಧಃಪತನದ ಕರಾಳ ದರ್ಶನ) “ಭಾರತೀಯ ಸಂಸ್ಕೃತಿಯಲ್ಲಿ ವೈದ್ಯನನ್ನು ‘ವೈದ್ಯೋ ನಾರಾಯಣೋ ಹರಿಃ’ ಎಂದು ಸಾಕ್ಷಾತ್ ಭಗವಂತನ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ತಪ್ಪು ಹಾದಿ ತುಳಿದು, ದುಶ್ಚಟಗಳಿಗೆ ದಾಸನಾಗಿ ಕಾಯಿಲೆಗೆ ತುತ್ತಾದರೂ, ಆ ಕ್ಷಣದಲ್ಲಿ...

Recommended For You

About the Author: Kanneshwar Naik

Leave a Reply

Your email address will not be published. Required fields are marked *